* ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಕೀರನ್ ಪೊಲ್ಲಾರ್ಡ್‌* 15 ವರ್ಷಗಳ ಕಾಲ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ದೈತ್ಯ ಕ್ರಿಕೆಟಿಗ* ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪೊಲ್ಲಾರ್ಡ್

ಮುಂಬೈ(ಏ.21): ವೆಸ್ಟ್‌ ಇಂಡೀಸ್‌ ಸ್ಫೋಟಕ ಬ್ಯಾಟರ್‌ ಕೀರನ್‌ ಪೊಲ್ಲಾರ್ಡ್‌ (Kieron Pollard) 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಮಂಗಳವಾರ ವಿದಾಯ ಘೋಷಿಸಿದ್ದಾರೆ. ಸದ್ಯ ಮುಂಬೈನಲ್ಲಿರುವ ಅವರು ಸಾಮಾಜಿಕ ತಾಣದಲ್ಲಿ ತಮ್ಮ ನಿವೃತ್ತಿಯನ್ನು ಘೋಷಿಸಿದರು. 2007ರಲ್ಲಿ ವಿಂಡೀಸ್‌ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪೊಲ್ಲಾರ್ಡ್‌ ಈವರೆಗೆ 123 ಏಕದಿನ, 101 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 2,706 ಹಾಗೂ 1,569 ರನ್‌ ಕಲೆ ಹಾಕಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ 55 ಹಾಗೂ 44 ವಿಕೆಟ್ ಕಬಳಿಸಿದ್ದಾರೆ.

15 ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿದರೂ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಡುವ ಅವಕಾಶ ಸಿಗಲಿಲ್ಲ. ಐಪಿಎಲ್‌ ಸೇರಿ ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ಅವರು ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಕೀರನ್ ಪೊಲ್ಲಾರ್ಡ್ ಅವರನ್ನು ಕಳೆದ ಫೆಬ್ರವರಿಯಲ್ಲಿ ನಡೆದ ಐಪಿಎಲ್‌ ಆಟಗಾರರ ಮೆಗಾ ಹರಾಜಿಗೂ (IPL Mega Auction) ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯು ಪೊಲ್ಲಾರ್ಡ್ ಅವರನ್ನು ರೀಟೈನ್ ಮಾಡಿಕೊಂಡಿತ್ತು.

ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾಗಿದ್ದ ಕೀರನ್ ಪೊಲ್ಲಾರ್ಡ್‌ ಒಂದು ವಿಡಿಯೋ ಮೂಲಕ ದಿಢೀರ್ ಎನ್ನುವಂತೆ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾನಿಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ತೀರ್ಮಾನಿಸಿದ್ದೇನೆ. ನಾನು 10 ವರ್ಷದ ಬಾಲಕನಾಗಿದ್ದಾಗಲೇ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಬೇಕು ಎನ್ನುವುದು ನನ್ನ ಕನಸಾಗಿತ್ತು. ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 15 ವರ್ಷಗಳ ಕಾಲ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ

View post on Instagram

IPL 2022: ಟಿಮ್‌ ಸೀಫರ್ಚ್‌ಗೆ ಕೋವಿಡ್ ಸೋಂಕು: ಡೆಲ್ಲಿ ಟೀಂನಲ್ಲಿ 6ನೇ ಕೇಸ್‌..!

2012ರಲ್ಲಿ ವೆಸ್ಟ್ ಇಂಡೀಸ್ ತಂಡವು ಚೊಚ್ಚಲ ಟಿ20 ವಿಶ್ವಕಪ್ (ICC T20 World Cup) ಜಯಿಸಿದ ತಂಡದಲ್ಲಿ ಪೊಲ್ಲಾರ್ಡ್‌ ಮಹತ್ವದ ಪಾತ್ರ ವಹಿಸಿದ್ದರು. ಇದಾದ ಬಳಿಕ 2016ರ ಟಿ20 ವಿಶ್ವಕಪ್ ಟ್ರೋಫಿಯನ್ನು ವೆಸ್ಟ್ ಇಂಡೀಸ್ ತಂಡವು ಜಯಿಸಿತ್ತಾದರೂ, ಗಾಯದ ಸಮಸ್ಯೆಯಿಂದಾಗಿ ಪೊಲ್ಲಾರ್ಡ್ ವಿಂಡೀಸ್ ತಂಡದಿಂದ ಹೊರಗುಳಿದಿದ್ದರು. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ (Yuvraj Singh) ಬಳಿಕ 6 ಎಸೆತಗಳಲ್ಲಿ 6 ಸಿಕ್ಸರ್‌ ಸಿಡಿಸಿದ ಅಪರೂಪದ ದಾಖಲೆ ಮಾಡಿದ್ದಾರೆ. ಕಳೆದ ವರ್ಷ ಶ್ರೀಲಂಕಾದ ಅಕಿಲಾ ಧನಂಜಯ ಬೌಲಿಂಗ್‌ನಲ್ಲಿ ಪೊಲ್ಲಾರ್ಡ್‌ 6 ಎಸೆತಗಳಲ್ಲಿ 6 ಸಿಕ್ಸರ್ ಚಚ್ಚಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ.

ಕೀರನ್ ಪೊಲ್ಲಾರ್ಡ್ ವೆಸ್ಟ್ ಇಂಡೀಸ್ ಪರ 100 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ. ಇದಷ್ಟೇ ಅಲ್ಲದೇ ಕ್ರಿಸ್ ಗೇಲ್(Chris Gayle) (552) ಬಳಿಕ ಅತಿಹೆಚ್ಚು ಅಂತಾರಾಷ್ಟ್ರೀಯ ಸಿಕ್ಸರ್ ಸಿಡಿಸಿದ ದಾಖಲೆ ಕೀರನ್ ಪೊಲ್ಲಾರ್ಡ್ ಹೆಸರಿನಲ್ಲಿದೆ. ಕೆರಿಬಿಯನ್ ದೈತ್ಯ ಕ್ರಿಕೆಟಿಗ ಪೊಲ್ಲಾರ್ಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 234 ಸಿಕ್ಸರ್ ಚಚ್ಚಿದ್ದಾರೆ.