ವಾಸೀಂ ಅಕ್ರಂನಿಂದ ವಿರಾಟ್ ಕೊಹ್ಲಿವರೆಗೆ; ರಿಷಭ್ ಪಂತ್ ಚೇತರಿಕೆಗೆ ಪ್ರಾರ್ಥಿಸಿದ ಕ್ರಿಕೆಟಿಗರು..!
ರಿಷಭ್ ಪಂತ್ ಕಾರು ಅಪಘಾತ, ಪ್ರಾಣಾಪಾಯದಿಂದ ಕ್ರಿಕೆಟಿಗ ಪಾರು
ರಿಷಭ್ ಪಂತ್ ಬೇಗ ಗುಣಮುಖರಾಗಲು ಕ್ರಿಕೆಟಿಗರ ಹಾರೈಕೆ
ಇಂದು ಮುಂಜಾನೆ ರಿಷಭ್ ಪಂತ್ ಕಾರು ಅಪಘಾತ
ಬೆಂಗಳೂರು(ಡಿ.30): ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್, ಇಂದು ಮುಂಜಾನೆ ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, ಡೆಹ್ರಾಡೂನ್‌ನಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಲ್ಲಿಯಿಂದ ಉತ್ತರಖಂಡ್‌ನಲ್ಲಿರುವ ತಮ್ಮ ಕುಟುಂಬದರನ್ನು ಭೇಟಿಯಾಗಲು ತೆರಳುತ್ತಿದ್ದಾಗ ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದಿದ್ದು, ರಿಷಭ್ ಪಂತ್, ತೀವ್ರ ಗಾಯಕ್ಕೆ ತುತ್ತಾಗಿದ್ದಾರೆ.
ಡೆಲ್ಲಿಯಿಂದ ತಮ್ಮ ಐಶಾರಾಮಿ ಮರ್ಸಿಡೀಸ್ ಕಾರಿನಲ್ಲಿ ಉತ್ತರಖಂಡ್‌ನತ್ತ ಪ್ರಯಾಣ ಬೆಳೆಸಿದ್ದ ರಿಷಭ್ ಪಂತ್, ಇಂದು ಮುಂಜಾನೆ 5.30ರ ಸುಮಾರಿಗೆ ಉತ್ತರಖಂಡ್ ಸಮೀಪದ ರೂರ್ಕಿಯಲ್ಲಿ ಕಾರು ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದ ರಬಸಕ್ಕೆ ರಿಷಭ್ ಪಂತ್ ಅವರ ತಲೆ, ಮೊಣಕಾಲು ಹಾಗೂ ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆಯಾದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ನಿಯಂತ್ರಣ ತಪ್ಪಿದ ಕಾರು, ರೋಡ್ ಡಿವೈಡರ್‌ಗೆ ಅಪ್ಪಳಿಸಿದೆ. ಪರಿಣಾಮ ಕಾರು ಪಲ್ಟಿಹೊಡೆದು ಬಿದ್ದಿದೆ. ಇದರ ಬೆನ್ನಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಸ್ ಡ್ರೈವರ್ ಸುಶೀಲ್ ಎಂಬಾತ ತಕ್ಷಣವೇ ಪಂತ್ ರಕ್ಷಣೆಗೆ ಆಗಮಿಸಿ ಮಾನವೀಯತೆ ಮೆರೆದಿದ್ದಾರೆ.
"ನಾನು ರಿಷಭ್ ಪಂತ್": ರಕ್ಷಿಸಲು ಬಂದ ಬಸ್ ಡ್ರೈವರ್ ಬಳಿ ಪಂತ್ ಹೇಳಿದ್ದೇನು..?
ಇನ್ನು ಅಪಘಾತದಿಂದ ರಿಷಭ್ ಪಂತ್, ಗಾಯಗೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಕ್ರಿಕೆಟ್ ಜಗತ್ತಿನಿಂದ ಹಾರೈಕೆಗಳ ಮಹಾಪೂರವೇ ಹರಿದು ಬಂದಿದ್ದು, ಟ್ವೀಟ್ ಮೂಲಕವೇ ಪಂತ್ ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸೀಂ ಅಕ್ರಂ, ರಿಷಭ್ ಪಂತ್ ಅವರ ಅಪಘಾತದ ಸುದ್ದಿ ತಿಳಿದು ಆಘಾತವಾಯಿತು. ಯುವ ಕ್ರಿಕೆಟಿಗ ಆದಷ್ಟು ಬೇಗ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟ್ವೀಟ್ ಮಾಡಿ, ರಿಷಭ್ ಪಂತ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಆದಷ್ಟು ಬೇಗ ಗುಣಮುಖವಾಗು ಸಹೋದರ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಸೂಪರ್ ಸ್ಪೀಡ್‌ನಲ್ಲಿ ರಿಷಭ್ ಪಂತ್ ಚೇತರಿಸಿಕೊಳ್ಳಲಿ. ಆದಷ್ಟು ಬೇಗ ಗುಣಮುಖರಾಗಿ ಎಂದು ಟ್ವೀಟ್ ಮೂಲಕ ಹಾರೈಸಿದ್ದಾರೆ.
ರಿಷಭ್ ಪಂತ್ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನುವುದು ಖುಷಿಯ ವಿಚಾರ. ರಿಷಭ್ ಪಂತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಬೇಗ ಚೇತರಿಸಿಕೊಳ್ಳಿ ಚಾಂಪಿಯನ್ ಎಂದು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಆದಷ್ಟು ಬೇಗ ಚೇತರಿಸಿಕೊಳ್ಳಿ ರಿಷಭ್ ಪಂತ್. ನೀವು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.