"ನಾನು ರಿಷಭ್ ಪಂತ್": ರಕ್ಷಿಸಲು ಬಂದ ಬಸ್‌ ಡ್ರೈವರ್‌ ಬಳಿ ಪಂತ್ ಹೇಳಿದ್ದೇನು..?

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಷಭ್ ಪಂತ್
ರಿಷಭ್ ಪಂತ್ ಅವರನ್ನು ರಕ್ಷಿಸಿದ ಬಸ್ ಡ್ರೈವರ್
ಬಸ್ ಡ್ರೈವರ್ ಬಳಿ ರಿಷಭ್ ಪಂತ್ ಹೇಳಿದ್ದೇನು?

I am Rishabh Pant Team India cricketer told rescuer after horrific car crash kvn

ನವದೆಹಲಿ(ಡಿ.30): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂದು ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಡೆಲ್ಲಿ ಹಾಗೂ ಡೆಹ್ರಾಡೂನ್ ರಸ್ತೆಯ ಹಮ್ಮದ್‌ಪುರ್ ಝಲ್‌ನ ನರ್ಸನ್ ಬಾರ್ಡರ್‌ನ ರೋರ್ಕಿಯಲ್ಲಿ ರಸ್ತೆ ವಿಭಜಕ್ಕೆ, ರಿಷಭ್ ಪಂತ್ ಅವರ ಕಾರು ಡಿಕ್ಕಿ ಹೊಡೆದಿದೆ. ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ನಿಯಂತ್ರಣ ತಪ್ಪಿದ ಕಾರು, ರೋಡ್ ಡಿವೈಡರ್‌ಗೆ ಅಪ್ಪಳಿಸಿದೆ. ಪರಿಣಾಮ ಕಾರು ಪಲ್ಟಿಹೊಡೆದು ಬಿದ್ದಿದೆ. ಇದರ ಬೆನ್ನಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಸ್‌ ಡ್ರೈವರ್ ಸುಶೀಲ್ ಎಂಬಾತ ತಕ್ಷಣವೇ ಪಂತ್ ರಕ್ಷಣೆಗೆ ಆಗಮಿಸಿ ಮಾನವೀಯತೆ ಮೆರೆದಿದ್ದಾರೆ. 

ಈ ಘಟನೆಯ ಕುರಿತಂತೆ ಪ್ರತಿಕ್ರಿಯಿಸಿರುವ ಬಸ್ ಡ್ರೈವರ್ ಸುಶೀಲ್ ಕುಮಾರ್, ನಾನು ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದದ್ದನ್ನು ನೋಡಿದೆ. ಪಂತ್ ತುಂಬಾ ಗಾಯಗೊಂಡಿದ್ದರು. ಅವರು ಕಾರಿನಿಂದ ಕುಂಟುತ್ತಲೇ ಹೊರಬಂದರು. ನಾನು ಅವರ ಹತ್ತಿರವೇ ಬಸ್‌ ನಿಲ್ಲಿಸಿದೆ. ಆಗವರು ನಾನು ರಿಷಭ್ ಪಂತ್ ಎಂದು ಹೇಳಿದರು. ನಾನಾಗ ಅವರನ್ನು ಸುರಕ್ಷಿತ ಸ್ಥಳದಲ್ಲಿ ಕೂರಿಸಿದೆ. ನಂತರ ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ" ಎಂದು ಸ್ಪೋರ್ಟ್ಸ್‌ ತಕ್‌ ಚಾನೆಲ್‌ಗೆ ತಿಳಿಸಿದ್ದಾರೆ.

Rishabh Pant: ವಿಕೆಟ್ ಕೀಪರ್ ಪಂತ್ ಕಾರು ಅಪಘಾತ, ಮೈ ಜುಂ ಎನಿಸುವ ಸಿಸಿಟಿವಿ ವಿಡಿಯೋ ವೈರಲ್..!

ಇನ್ನು ಅಪಘಾತವಾದ ರಬಸಕ್ಕೆ ಅವರ ಪರ್ಸ್‌ ಹಾಗೂ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ರಸ್ತೆ ಮೇಲೆ ಬಿದ್ದಿದ್ದ ಆ ಹಣವನ್ನೆಲ್ಲ ಆರಿಸಿ ರಿಷಭ್ ಪಂತ್‌ಗೆ ಒಪ್ಪಿಸಿದ್ದಾಗಿ ಬಸ್ ಡ್ರೈವರ್ ಸುಶೀಲ್‌ ತಿಳಿಸಿದ್ದಾರೆ. ನಾನು ಹರಿದ್ವಾರ್ ಕಡೆಯಿಂದ ಬರುತ್ತಿದ್ದೆ. ರಿಷಭ್ ಪಂತ್ ಡೆಲ್ಲಿ ಕಡೆಯಿಂದ ಬರುತ್ತಿದ್ದರು. ರಿಷಭ್ ಪಂತ್ ಅವರಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಬ್ಯಾರಿಕೇಡ್‌ಗೆ ಅಪ್ಪಳಿಸಿ, ಸುಮಾರು 200 ಮೀಟರ್ ನೆಲದಲ್ಲಿ ಕಾರು ಉಜ್ಜಿಕೊಂಡು ಹೋಯಿತು ಎಂದು ಸುಶೀಲ್ ಕುಮಾರ್, ಅಪಘಾತದ ಸನ್ನಿವೇಶವನ್ನು ವಿವರಿಸಿದ್ದಾರೆ. 

ಇನ್ನು ಈ ಘಟನೆಯ ಬಗ್ಗೆ ಮಾತನಾಡಿರುವ ಉತ್ತರಖಂಡ್‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಿಷಭ್ ಪಂತ್ ಅವರ ವೈದ್ಯಕೀಯ ಚಿಕಿತ್ಸೆಗೆ ತಗುಲುವ ಎಲ್ಲಾ ಖರ್ಚು-ವೆಚ್ಚಗಳನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ರಿಷಭ್ ಪಂತ್ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. 

ರಿಷಭ್ ಪಂತ್ ಅವರ ಅಪಘಾತದ ಸುದ್ದಿ ನಮಗೆ ತೀವ್ರ ನೋವನ್ನುಂಟು ಮಾಡಿತು. ಆದರೆ ಅದೃಷ್ಟವಶಾತ್ ಅವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಕ್ಷಣ ಕ್ಷಣದ ಮಾಹಿತಿಯನ್ನು ನಾವು ಪಡೆದುಕೊಳ್ಳುತ್ತಿದ್ದೇವೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಡೆಲ್ಲಿ ಡಿಸ್ಟ್ರಿಕ್ಟ್‌ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಸಿದ್ದಾರ್ಥ್‌ ಸಾಹಿಬ್ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios