ಡೆಲ್ಲಿ ತಂಡದ ನೂತನ ನಾಯಕನಾಗಿ ನೇಮಕವಾಗಿರುವ ರಿಷಭ್‌ ಪಂತ್‌ ಮೊದಲ ಪಂದ್ಯದಲ್ಲೇ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ(ಏ.10): ಟೀಂ ಇಂಡಿಯಾ ಯುವ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ನಾಯಕನಾಗಿ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. 13ನೇ ಆವೃತ್ತಿಯ ರನ್ನರ್‌ ಅಪ್ ಡೆಲ್ಲಿ ತಂಡವು 3 ಬಾರಿ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಎದುರಿಸಲಿದೆ. ಇದೀಗ ಧೋನಿ ಜತೆ ಟಾಸ್‌ಗೆ ತೆರಳುವ ಬಗ್ಗೆ ಪಂತ್‌ ತುಟಿ ಬಿಚ್ಚಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಜತೆ ಟಾಸ್‌ಗೆ ತೆರಳುವುದು ನನ್ನ ಪಾಲಿಗೆ ಅತ್ಯಂತ ವಿಶೇಷವಾದ ಕ್ಷಣವಾಗಿರಲಿದೆ. ನಾನು ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡವೊಂದನ್ನು ಮುನ್ನಡೆಸುತ್ತಿದ್ದು, ಅದು ಮೊದಲ ಪಂದ್ಯದಲ್ಲೇ ಮಹೀ ಅಣ್ಣ ಎದುರು ಅಂದರೆ ನಿಜಕ್ಕೂ ಖುಷಿಯಾಗುತ್ತದೆ. ನಾನು ಧೋನಿಯವರಿಂದ ಸಾಕಷ್ಟು ಕಲಿತಿದ್ದೇನೆ. ಹಲವಾರು ಅನುಭವಗಳನ್ನು ಪಡೆದಿದ್ದೇನೆ. ಆ ಅನುಭವಗಳನ್ನೆಲ್ಲಾ ಧೋನಿ ಎದುರು ಬಳಸುತ್ತೇನೆ. ಈ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

IPL 2021: ಇಂದು ಧೋನಿ vs ಪಂತ್‌ ಫೈಟ್‌!

ಇಂಗ್ಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಭುಜದ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅಯ್ಯರ್ ಅನುಪಸ್ಥಿತಿಯಲ್ಲಿ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಪಟ್ಟ ಕಟ್ಟಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ರವಿಚಂದ್ರನ್ ಅಶ್ವಿನ್‌, ಸ್ಟೀವ್ ಸ್ಮಿತ್, ಅಜಿಂಕ್ಯ ರಹಾನೆ, ಶಿಖರ್ ಧವನ್ ಅವರಂತಹ ಬಲಾಢ್ಯ ಆಟಗಾರರಿದ್ದು ಇವರೆಲ್ಲರ ಅನುಭವವನ್ನು ಬಳಸಿಕೊಳ್ಳಲು ಪಂತ್‌ ಮುಂದಾಗಿದ್ದಾರೆ.