14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಎರಡನೇ ಪಂದ್ಯ ಗುರು ಶಿಷ್ಯರ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಎಂ ಎಸ್ ಧೋನಿ ನೇತೃತ್ವದ ಸಿಎಸ್‌ಕೆ ಎದುರು ಡೆಲ್ಲಿ ಕ್ಯಾಪಿಟಲ್ಸ್‌ ಕಾದಾಟ ನಡೆಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಮುಂಬೈ(ಏ.10): ಇದು ಗುರು-ಶಿಷ್ಯರ ಕದನ. ಒಬ್ಬ ಮಹಾ ನಾಯಕ. ಐಪಿಎಲ್‌ನಲ್ಲಿ ಎಲ್ಲಾ ರೀತಿ ಏಳು-ಬೀಳುಗಳನ್ನು ಕಂಡಿರುವ ಆಟಗಾರ. ಮತ್ತೊಬ್ಬ ಇದೇ ಮೊದಲ ಬಾರಿಗೆ ನಾಯಕತ್ವದ ಭಾರ ಹೊತ್ತು ಮೈದಾನಕ್ಕಿಳಿಯುತ್ತಿರುವ ಆಟಗಾರ. ಒಬ್ಬ ತಾಳ್ಮೆ, ಸಮಯಪ್ರಜ್ಞೆ, ಆಟದ ವಿವಿಧ ಆಯಾಮಗಳನ್ನು ಅರಿತಿರುವ ಜ್ಞಾನಿ. ಮತ್ತೊಬ್ಬ ಆಕ್ರಮಣಕಾರಿ, ಹೊಡಿ ಬಡಿ ಆಟಕ್ಕೆ ಹೆಸರುವಾಸಿ, ಎದುರಾಳಿಯನ್ನು ಕೆಣಕುವ, ಕೆರಳಿಸುವ ಯುವಕ. ಇದು ಐಪಿಎಲ್‌ 14ನೇ ಆವೃತ್ತಿಯ ಬಹು ನಿರೀಕ್ಷಿತ ಮುಖಾಮುಖಿಗಳಲ್ಲಿ ಒಂದು.

ಇಲ್ಲಿ ಗುರು ಎಂ.ಎಸ್‌.ಧೋನಿ, ಶಿಷ್ಯ ರಿಷಭ್‌ ಪಂತ್‌. ಧೋನಿಯ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಕಳೆದ ವರ್ಷದ ಕಳಪೆ ಪ್ರದರ್ಶನದ ಕಹಿ ನೆನಪನ್ನು ಮರೆಯುವ ತವಕ. ಪಂತ್‌ರ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕಳೆದೆರಡು ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಕಸಿದುಕೊಳ್ಳುವ ಉತ್ಸಾಹ. ಎರಡೂ ತಂಡಗಳಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡುವ ಹೆಗ್ಗುರಿ.

ಡಿವಿಲಿಯರ್ಸ್ ಅಬ್ಬರಕ್ಕೆ ಮುಂಬೈ ಧೂಳೀಪಟ: 14ನೇ ಆವೃತ್ತಿಯಲ್ಲಿ ಆರ್‌ಸಿಬಿ ಶುಭಾರಂಭ!

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋುತುರಾಜ್‌ ಗಾಯಕ್ವಾಡ್‌, ಫಾಫ್‌ ಡು ಪ್ಲೆಸಿ, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ(ನಾಯಕ), ಡ್ವೇನ್‌ ಬ್ರಾವೋ, ರವೀಂದ್ರ ಜಡೇಜಾ, ಮೋಯಿನ್‌/ಇಮ್ರಾನ್‌, ಸ್ಯಾಮ್‌ ಕರ್ರನ್‌, ಶಾರ್ದೂಲ್‌ ಠಾಕೂರ್‌, ದೀಪಕ್‌ ಚಹರ್‌.

ಡೆಲ್ಲಿ: ಶಿಖರ್‌ ಧವನ್‌, ಪೃಥ್ವಿ ಶಾ, ಸ್ಟೀವ್‌ ಸ್ಮಿತ್‌, ರಿಷಭ್‌ ಪಂತ್‌(ನಾಯಕ), ಮಾರ್ಕಸ್‌ ಸ್ಟೋಯ್ನಿಸ್‌, ಶಿಮ್ರೊನ್‌ ಹೆಟ್ಮೇಯರ್‌, ಕ್ರಿಸ್‌ ವೋಕ್ಸ್‌/ಟಾಮ್‌ ಕರ್ರನ್‌, ಆರ್‌.ಅಶ್ವಿನ್‌, ಅಮಿತ್‌ ಮಿಶ್ರಾ, ಉಮೇಶ್‌ ಯಾದವ್‌, ಇಶಾಂತ್‌ ಶರ್ಮಾ.

ಪಿಚ್‌ ರಿಪೋರ್ಟ್‌

ಮುಂಬೈನ ವಾಂಖೇಡೆ ಕ್ರೀಡಾಂಗಣ ಬ್ಯಾಟ್ಸ್‌ಮನ್‌ ಸ್ನೇಹಿ ಎನಿಸಿದ್ದು, ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ 180-190 ರನ್‌ ಗಳಿಸಿದರೂ ರಕ್ಷಿಸಿಕೊಳ್ಳುವ ಸಾಧ್ಯತೆ ಕಡಿಮೆ. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ 189.

ಸ್ಥಳ: ಮುಂಬೈ, 
ಪಂದ್ಯ ಆರಂಭ: ಸಂಜೆ 7.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್