ವಿರೇಂದ್ರ ಸೆಹ್ವಾಗ್ ಮಗನಾಗಿ ಹುಟ್ಟಿದ್ದೇ ಆರ್ಯವೀರ್ಗೆ ದೊಡ್ಡ ನಷ್ಟ.ತನ್ನದೇ ಛಾಪು ಮೂಡಿಸುವುದು ಆತನಿಗೆ ಅತ್ಯಂತ ಮುಖ್ಯ! ಮಗನ ಕ್ರಿಕೆಟ್ ಪಯಣ ಹಾಗೂ ವೃತ್ತಿಜೀವನದ ಸವಾಲುಗಳ ಕುರಿತು ವೀರೂ ನೀಡಿದ ಸ್ಫೋಟಕ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.
ವೀರೇಂದ್ರ ಸಹ್ವಾಗ್ ಅವರಂತಹ ದಿಗ್ಗಜ ಆಟಗಾರನ ಮಗನಾಗಿರುವುದರಿಂದ ಆರ್ಯವೀರ್ ಮೇಲೆ ನಿರೀಕ್ಷೆಗಳ ಭಾರ ಹೆಚ್ಚಿರುತ್ತದೆ. ಆತ ಸ್ವಲ್ಪ ಎಡವಿದರೂ ತಂದೆಯ ಹೆಸರಿಗೆ ಹೋಲಿಸಿ ಟೀಕೆ ಮಾಡುವವರೇ ಹೆಚ್ಚು ಎಂದು ಸೆಹ್ವಾಗ್ ಹೇಳಿದ್ದಾರೆ. ಪ್ರಸಿದ್ಧ ಸರ್ನೇಮ್ ಇದ್ದಾಗ ಬರುವ ಟೀಕೆಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಂದೆಯ ನೆರಳಿನಿಂದ ಹೊರಬಂದು, ಮೈದಾನದಲ್ಲಿ ದೊಡ್ಡ ರನ್ ಗಳಿಸುವ ಮೂಲಕ ಆರ್ಯವೀರ್ ತನ್ನದೇ ಆದ ಸ್ವಂತ ಛಾಪು ಮತ್ತು ಗೌರವವನ್ನು ಗಳಿಸಬೇಕು ಎಂದು ವೀರೂ ಸ್ಪಷ್ಟಪಡಿಸಿದ್ದಾರೆ.
ಬ್ಯಾಟ್ ಮೂಲಕವೇ ಉತ್ತರ ನೀಡಿದ ಆರ್ಯವೀರ್!
2026ರ ಅಂಡರ್-19 ಏಷ್ಯಾ ಕಪ್ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಆರ್ಯವೀರ್ ಪ್ರಮುಖ ಪಾತ್ರ ವಹಿಸಿದ್ದು, ಟೂರ್ನಿಯ 5 ಪಂದ್ಯಗಳಲ್ಲಿ 361 ರನ್ (1 ಶತಕ, 3 ಅರ್ಧಶತಕ) ಸಿಡಿಸಿ 'ಸರಣಿ ಶ್ರೇಷ್ಠ'ಪ್ರಶಸ್ತಿ ಗೆದ್ದಿದ್ದಾರೆ. ಅದರಂತೆ ನವೆಂಬರ್ 14ರಂದು ಪಾಕಿಸ್ತಾನ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 338 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕನಾಗಿ 58 ರನ್ಗಳ ಅಮೂಲ್ಯ ಕೊಡುಗೆ ನೀಡುವ ಮೂಲಕ ಆರ್ಯವೀರ್ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ವೀರೂ ಹೆಮ್ಮೆಯ ಮಾತುಗಳು!
ಕೇವಲ 30-40 ರನ್ ಗಳಿಸಿದರೆ ಯಾರೂ ನೆನಪಿಟ್ಟುಕೊಳ್ಳುವುದಿಲ್ಲ, ಗೌರವ ಗಳಿಸಬೇಕಾದರೆ ದೊಡ್ಡ ಇನ್ನಿಂಗ್ಸ್ ಕಟ್ಟಬೇಕು ಎಂದು ನಾನು ಅವನಿಗೆ ಹೇಳುತ್ತಿದ್ದೆ. ಏಷ್ಯಾ ಕಪ್ನಲ್ಲಿ ದೊಡ್ಡ ಸ್ಕೋರ್ ಮಾಡಿ ಅವನು ಕ್ರಿಕೆಟ್ ಲೋಕದ ಗೌರವ ಸಂಪಾದಿಸಿದ್ದಾನೆ, ಇದಕ್ಕಾಗಿ ನನಗೆ ತುಂಬಾ ಖುಷಿಯಿದೆ ಎಂದು ಸೆಹ್ವಾಗ್ ಮಗನ ಬೆನ್ನು ತಟ್ಟಿದ್ದಾರೆ.
ಯುಎಇ ವಿರುದ್ಧ ಸ್ಫೋಟಕ 160 ರನ್ಗಳ ಅಬ್ಬರ!
ಈ ಟೂರ್ನಿಯಲ್ಲಿ ಆರ್ಯವೀರ್ ಅವರ ಅತ್ಯುತ್ತಮ ಇನ್ನಿಂಗ್ಸ್ ಯುಎಇ ವಿರುದ್ಧ ಮೂಡಿಬಂದಿದ್ದು, ಕೇವಲ 168 ಎಸೆತಗಳಲ್ಲಿ 17 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ನೆರವಿನಿಂದ 160 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್ ಮೂಲಕ ತಮ್ಮ ತಂದೆಯ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದ್ದರು. ಓಮನ್ನಲ್ಲಿ ನಡೆದ 2026ರ ಅಂಡರ್-19 ಏಷ್ಯಾ ಕಪ್ನ 5 ಪಂದ್ಯಗಳಲ್ಲಿ ಆರ್ಯವೀರ್ ಕ್ರಮವಾಗಿ 70 (ನೇಪಾಳ ವಿರುದ್ಧ), 22 (ಪಾಕಿಸ್ತಾನ ವಿರುದ್ಧ ಲೀಗ್), 160 (ಯುಎಇ ವಿರುದ್ಧ), 51 (ಅಫ್ಘಾನಿಸ್ತಾನ ವಿರುದ್ಧ ಸೆಮಿಫೈನಲ್) ಮತ್ತು 58 (ಪಾಕಿಸ್ತಾನ ವಿರುದ್ಧ ಫೈನಲ್) ರನ್ ಗಳಿಸಿ 90.25ರ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ.














