ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗಳು ಅನಯಾ ಬಂಗಾರ್ ಇದೀಗ ಯೋಗರಾಜ್ ಸಿಂಗ್ ಅವರ ಬಳಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಮಹಿಳಾ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡುವಂತೆ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಬೆಂಗಳೂರು(ನ.19): ಮಾಜಿ ಭಾರತೀಯ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗಳು ಅನಯಾ ಬಂಗಾರ್ ಇದೀಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಅವರ ಬಳಿ ಕ್ರಿಕೆಟ್ ತರಬೇತಿ ಪಡೆಯಲು ಆರಂಭಿಸಿದ್ದಾರೆ. ಟ್ರಾನ್ಸ್‌ಜೆಂಡರ್ ಮತ್ತು ಲಿಂಗ ವೈವಿಧ್ಯ ಹೊಂದಿರುವ ಆಟಗಾರರಿಗೆ ಸಂಬಂಧಿಸಿದ ನೀತಿಯಡಿ ಕ್ರಿಕೆಟ್ ಆಸ್ಟ್ರೇಲಿಯಾ (CA) ಎಲೈಟ್ ಕ್ರಿಕೆಟ್‌ನಲ್ಲಿ ಆಡಲು ಅನುಮತಿ ನೀಡಿದ ಕೆಲವು ತಿಂಗಳ ಬಳಿಕ ಅನಯಾ ಈ ತರಬೇತಿ ಆರಂಭಿಸಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ತಂದೆಯಾಗಿರುವ ಯೋಗರಾಜ್ ಸಿಂಗ್, ಯುವ ಕ್ರಿಕೆಟಿಗರಿಗೆ ತರಬೇತಿ ನೀಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ತಮ್ಮ ಮಗ ಯುವರಾಜ್ ಅವರ ಆಟವನ್ನು ರೂಪಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅನಯಾ ಬಂಗಾರ್ ಅವರು ತಮ್ಮ ಕ್ರಿಕೆಟ್ ಕೌಶಲಗಳ ಕುರಿತು ಯೋಗರಾಜ್ ಸಿಂಗ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಅನಯಾ ಅವರ ಬ್ಯಾಟ್ ಸ್ವಿಂಗ್ ಮತ್ತು ಬ್ಯಾಟ್ ಚಲನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯೋಗರಾಜ್, ತಮ್ಮೊಂದಿಗೆ ತರಬೇತಿ ಅವಧಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.

ಮಹಿಳಾ ಕ್ರಿಕೆಟ್‌ನಲ್ಲಿ ಅವಕಾಶ ನೀಡಲು ಬಿಸಿಸಿಐಗೆ ಮನವಿ

ಇದಕ್ಕೂ ಮೊದಲು, ಟ್ರಾನ್ಸ್‌ಜೆಂಡರ್ ಆಟಗಾರರು ಮಹಿಳಾ ಕ್ರಿಕೆಟ್‌ನಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಮಾರ್ಗವನ್ನು ರೂಪಿಸುವಂತೆ ಅನಯಾ ಬಂಗಾರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಮನವಿ ಮಾಡಿದ್ದರು. ಈ ವಿಚಾರದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಅನುಸರಿಸಿರುವ ನೀತಿಯನ್ನು ಬಿಸಿಸಿಐ ಕೂಡ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದರು.

“ಬಿಸಿಸಿಐ ಆಸ್ಟ್ರೇಲಿಯಾ ಅನುಸರಿಸಿರುವ ಕ್ರಮವನ್ನು ಅನುಸರಿಸಿದರೆ, ಅದು ನಿಜಕ್ಕೂ ಅದ್ಭುತವಾಗಿರುತ್ತದೆ,” ಎಂದು ಅನಾಯಾ ಬಂಗಾರ್ ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇನ್ನು ಇದೇ ವೇಳೆ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸಿದ ನಿಂದನೆ ಮತ್ತು ಟೀಕೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

“ನಾನು ಅನುಭವಿಸಿದ್ದನ್ನು ಅವರು ಅನುಭವಿಸಿಲ್ಲ,” ಎಂದು ಆನ್‌ಲೈನ್‌ನಲ್ಲಿ ತಮ್ಮ ವಿರುದ್ಧ ವ್ಯಕ್ತವಾದ ಟೀಕೆಗಳಿಗೆ ಅನಯಾ ಪ್ರತಿಕ್ರಿಯಿಸಿದ್ದಾರೆ.

View post on Instagram
 

ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರಕ್ಕೆ ಮ್ಯಾರಿಜಾನ್ ಕಾಪ್ ವಿರೋಧ

ಟ್ರಾನ್ಸ್‌ಜೆಂಡರ್ ಕ್ರಿಕೆಟಿಗರಿಗೆ ಸಂಬಂಧಿಸಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡ ಮಹತ್ವದ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮ್ಯಾರಿಜಾನ್ ಕಾಪ್ ಕೂಡ ಈ ನಿರ್ಧಾರವನ್ನು ಟೀಕಿಸಿದ್ದರು. “ಇದು ಸಂಪೂರ್ಣವಾಗಿ ಅಸಂಬದ್ಧ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು!” ಎಂದು ಕಾಪ್ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಯಲ್ಲಿ ಅವರು ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL)ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯನ್ನೂ ಟ್ಯಾಗ್ ಮಾಡಿದ್ದರು.

ಆದರೆ, ಕಾಪ್ ಅವರ ಹೇಳಿಕೆಗೆ ಅನಯಾ ಬಂಗಾರ್ ಆಕ್ಷೇಪ ವ್ಯಕ್ತಪಡಿಸದೆ, ಅವರ ಅಭಿಪ್ರಾಯದ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಜೊತೆಗೆ, ಅನ್ಯಾಯದ ದೈಹಿಕ ಅನುಕೂಲದ ಕುರಿತ ವಾದಕ್ಕೆ ತಮ್ಮ ಮೇಲೆ ನಡೆಸಿದ ವೈಜ್ಞಾನಿಕ ಪರೀಕ್ಷೆಗಳ ವಿವರಗಳನ್ನು ಮುಂದಿಟ್ಟಿದ್ದಾರೆ. “ಅವರು ಯಾವ ದೃಷ್ಟಿಕೋನದಿಂದ ಈ ಮಾತನ್ನು ಹೇಳಿದ್ದಾರೆ ಎಂಬುದು ನನಗೆ ಅರ್ಥವಾಗುತ್ತದೆ. ಅನ್ಯಾಯದ ದೈಹಿಕ ಅನುಕೂಲದ ಕುರಿತ ಪ್ರಶ್ನೆಗೆ ಉತ್ತರಿಸುವುದಾದರೆ, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನಲ್ಲಿ ನನ್ನ ಮೇಲೆ ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ವರ್ಷ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಪಡೆದ ಬಳಿಕ ನನ್ನ ದೈಹಿಕ ಸಾಮರ್ಥ್ಯಗಳನ್ನು ಪರಿಶೀಲಿಸಲು 12 ವಾರಗಳ ಕಾಲ ಪರೀಕ್ಷಾ ಕಾರ್ಯಕ್ರಮ ನಡೆಸಲಾಯಿತು. ಆ ಪರೀಕ್ಷೆಯ ತೀರ್ಮಾನದ ಪ್ರಕಾರ, ನನ್ನ ದೈಹಿಕ ಸಾಮರ್ಥ್ಯದ ಮಾನದಂಡಗಳು ಸಿಸ್‌ಜೆಂಡರ್ ಮಹಿಳಾ ಕ್ರೀಡಾಪಟುಗಳ ವ್ಯಾಪ್ತಿಯಲ್ಲಿವೆ,” ಎಂದು ಅನಯಾ ವಿವರಿಸಿದ್ದಾರೆ. ಈ ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾದ ನಿರ್ಧಾರಕ್ಕೆ ಸಂಬಂಧಿಸಿದ ಚರ್ಚೆಯ ನಡುವೆ, ತಮ್ಮ ದೈಹಿಕ ಸಾಮರ್ಥ್ಯದ ಕುರಿತು ನಡೆದ ಪರೀಕ್ಷೆಗಳನ್ನೂ ಅನಯಾ ಉಲ್ಲೇಖಿಸಿದ್ದಾರೆ.