2019ರ ವಿಶ್ವಕಪ್ ಗೆ ಆಯ್ಕೆಯಾಗಿದ್ದ ಇಂಡಿಯಾ ಆಟಗಾರರ ಬಗ್ಗೆ ಈಗ ಚರ್ಚೆಯಾಗ್ತಿದೆ. ಅಂಬಟಿ ರಾಯಡು ಟೀಂನಿಂದ ಹೊರಗಿರೋಕೆ ಕಾರಣ ಕೊಹ್ಲಿ ಎನ್ನಲಾಗ್ತಿದ್ದು, ಇದಕ್ಕೆ ಅಂಬಟಿ ಉತ್ತರ ಏನು ಗೊತ್ತಾ? 

2019 ರ ವಿಶ್ವಕಪ್ (2019 World Cup) ತಂಡದಿಂದ ಮಾಜಿ ಬ್ಯಾಟ್ಸ್ ಮೆನ್ ಅಂಬಟಿ ರಾಯುಡು (Ambati Rayudu) ಅವರನ್ನು ಕೈಬಿಟ್ಟಿದ್ದ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಇದಕ್ಕೆ ಆಗ ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ (Virat Kohli)ಯೇ ಕಾರಣ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಈ ಬಗ್ಗೆ ಅಂಬಟಿ ರಾಯುಡು ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಕಪ್ ತಂಡದಿಂದ ನನ್ನನ್ನು ಕೈಬಿಟ್ಟ ಬಗ್ಗೆ ಯಾರ ಮೇಲೂ ಬೆರಳು ತೋರಿಸಲು ಬಯಸುವುದಿಲ್ಲ. ವಿಶೇಷವಾಗಿ ಆಗಿನ ನಾಯಕ ವಿರಾಟ್ ಕೊಹ್ಲಿ ಮೇಲೆ ಬೆರಳು ತೋರಿಸಲು ಇಷ್ಟಪಡೋದಿಲ್ಲ ಎಂದು ಅಂಬಟಿ ರಾಯುಡು ಸ್ಪಷ್ಟಪಡಿಸಿದ್ದಾರೆ.

2019ರ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ನಂಬರ್ 4 ಸ್ಥಾನಕ್ಕೆ ರಾಯುಡು ಅತಿದೊಡ್ಡ ಸ್ಪರ್ಧಿಯಾಗಿದ್ದರು. ತಂಡಕ್ಕೆ ಅವರು ಆಯ್ಕೆ ಆಗೇ ಆಗ್ತಾರೆ ಎನ್ನಲಾಗ್ತಿತ್ತು. ಆದರೆ ಇದ್ದಕ್ಕಿದ್ದಂತೆ ಅವರನ್ನು ಕೈಬಿಡಲಾಯಿತು. ವಿಜಯ್ ಶಂಕರ್ಗೆ ಸ್ಥಾನ ನೀಡಲಾಯಿತು. ಈ ನಿರ್ಧಾರ ಎಲ್ಲರಿಗೂ ಆಘಾತ ತಂದಿತ್ತು. ಈ ಬಗ್ಗೆ ಆಗ್ಲೇ ಸಾಕಷ್ಟು ಚರ್ಚೆ, ವಾದ- ವಿವಾದಗಳು ನಡೆದಿದ್ದವು.

ರಾಬಿನ್ ಉತ್ತಪ್ಪ ಕೊಹ್ಲಿ ಮೇಲೆ ಆರೋಪ : ವಾಸ್ತವವಾಗಿ, ಇತ್ತೀಚೆಗೆ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿಯೇ ಅಂಬಟಿ ರಾಯುಡು ಅವರನ್ನು ತಂಡದಿಂದ ತೆಗೆಯಲು ಕಾರಣ ಅಂತ ಆರೋಪ ಮಾಡಿದ್ದರು. ವಿರಾಟ್ ಕೊಹ್ಲಿ ಮೇಲೆ ಪಕ್ಷಪಾತದ ಆರೋಪ ಮಾಡಿದ್ದರು. ರಾಯುಡುಗೆ ಕೊಹ್ಲಿ ಅನ್ಯಾಯ ಮಾಡಿದ್ದಾರೆ ಎಂದಿದ್ದರು. ಉತ್ತಪ್ಪ ಅವರ ಹೇಳಿಕೆಯ ನಂತ್ರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ.

ವಿರಾಟ್ ಕೊಹ್ಲಿಗೆ ಯಾರಾದ್ರೂ ಇಷ್ಟವಾಗದಿದ್ದರೆ ಅಥವಾ ಒಬ್ಬ ಆಟಗಾರ ಒಳ್ಳೆಯವನಲ್ಲ ಅಂತ ಅವರು ಭಾವಿಸಿದ್ರೆ ಅವರನ್ನು ತಂಡದಿಂದ ಕೈಬಿಡ್ತಿದ್ದರು ಅಂತ ಉತ್ತಪ್ಪ ಹೇಳಿದ್ದರು. ರಾಯುಡು ಇದಕ್ಕೆ ದೊಡ್ಡ ಉದಾಹರಣೆ. ಅವರು ವಿಶ್ವಕಪ್ ಕಿಟ್, ಬಟ್ಟೆಗಳೊಂದಿಗೆ ಮನೆಯಲ್ಲಿ ಕಾಯ್ತಾ ಕುಳಿತಿದ್ದರು. ಅವರೇ ವಿಶ್ವಕಪ್ ಆಡುತ್ತಾರೆ ಅಂತ ಭಾವಿಸಲಾಗಿತ್ತು. ಆದ್ರೆ ಇದ್ದಕ್ಕಿದ್ದಂತೆ ರಾಯುಡು ಬಾಗಿಲು ಮುಚ್ಚಿತು. ಇದು ಸರಿಯಾಗಿರಲಿಲ್ಲ ಎಂದಿದ್ದರು.

ರಾಯುಡು ಈ ವಿಷಯದ ಬಗ್ಗೆ ಈಗ ಸ್ಪಷ್ಟನೆ ನೀಡಿದ್ದಾರೆ. ಮೊದಲನೆಯದಾಗಿ, ಅಂಬಟಿ ರಾಯುಡು, ಕೊಹ್ಲಿಯನ್ನು ದೂಷಿಸೋದಿಲ್ಲ ಎಂದಿದ್ದಾರೆ. ಎರಡನೆಯದಾಗಿ, ರಾಬಿನ್ ಹೇಳಿದ್ದು ಸರಿ ಎಂದೂ ರಾಯುಡು ಹೇಳಿದ್ದಾರೆ. ಕೆಲ ಸಮಯ ಇಂಥ ಘಟನೆ ಸಂಭವಿಸುತ್ತಿತ್ತು. ಆದ್ರೆ ಕೊಹ್ಲಿ ನನ್ನ ವೃತ್ತಿಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ನನ್ನನ್ನು ಬೆಂಬಲಿಸಿದ್ದಾರೆ ಎಂದು ರಾಯುಡು ಹೇಳಿದ್ದಾರೆ.

ರಾಬಿನ್ ಹೇಳಿದ್ದು ಸಂಪೂರ್ಣವಾಗಿ ನಿಜ, ಆದರೆ ಅದು ಎಲ್ಲ ಸಮಯಕ್ಕೂ ಅನ್ವಯಿಸೋದಿಲ್ಲ. ವಿರಾಟ್ ನನಗೆ ಹೆಚ್ಚು ಬೆಂಬಲ ನೀಡಿದ ಆಟಗಾರ.ವಿಶ್ವಕಪ್ ಸಮಯದಲ್ಲಿ ನನ್ನನ್ನು ಟೀಂನಿಂದ ತೆಗೆಯೋದು ಕೇವಲ ಕೊಹ್ಲಿ ನಿರ್ಧಾರ ಆಗಿರಲಿಲ್ಲ. ಅದು ಮ್ಯಾನೇಜ್ಮೆಂಟ್ನ ನಿರ್ಧಾರವಾಗಿತ್ತು. ಇದಕ್ಕೆ ಯಾವುದೇ ಕೋಚ್, ನಾಯಕ ಅಥವಾ ಆಯ್ಕೆದಾರರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ಸಮಯದಲ್ಲಿ ರಾಯುಡು, 2019 ರ ವಿಶ್ವಕಪ್ಗಾಗಿ ಟೀಮ್ ಇಂಡಿಯಾದ ಜೆರ್ಸಿ ಮತ್ತು ಕಿಟ್ ಅನ್ನು ಪಡೆದಿದ್ದೆ ಎಂದು ದೃಢಪಡಿಸಿದ್ದಾರೆ. ಹೌದು, ಆ ಸಮಯದಲ್ಲಿ ನನ್ನ ಬಳಿ ವಿಶ್ವಕಪ್ ಜೆರ್ಸಿ ಮತ್ತು ಕಿಟ್ ಇತ್ತು. ಏಕೆಂದರೆ ಪಾಸ್ಪೋರ್ಟ್ಗಳು, ವೀಸಾಗಳು ಮತ್ತು 20-25 ಆಟಗಾರರ ಕಿಟ್ಗಳನ್ನು ಮುಂಚಿತವಾಗಿ ಸಿದ್ಧಪಡಿಸಲಾಗುತ್ತದೆ. ಅದರ ನಂತರ ಆಯ್ಕೆ ನಡೆಯುತ್ತದೆ. ನನ್ನನ್ನು ತಂಡಕ್ಕೆ ಆಯ್ಕೆ ಮಾಡಿ ನಂತರ ಕೈಬಿಡಲಾಯಿತು ಎಂದಲ್ಲ. ಅತ್ಯಂತ ನಿರಾಶಾದಾಯಕ ವಿಷಯ ಅಂದ್ರೆ ನೀವು 4 ನೇ ಸ್ಥಾನದ ಬ್ಯಾಟ್ಸ್ಮನ್ ತೆಗೆದುಕೊಳ್ಳದಿದ್ದರೆ, ಅಲ್ಲಿ ಆಲ್ರೌಂಡರ್ನ ಅಗತ್ಯವೇನು? 4 ನೇ ಸ್ಥಾನದಲ್ಲಿ ಟಾಪ್ ಆರ್ಡರ್ ಮತ್ತು ಕೆಳ ಮಧ್ಯಮ ಕ್ರಮಾಂಕದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬಲ್ಲ ಬ್ಯಾಟ್ಸ್ಮನ್ನ ಅಗತ್ಯವಿತ್ತು ಎಂದು ರಾಯುಡು ಹೇಳಿದ್ದಾರೆ.