ಆಸೀಸ್ ಎದುರಿನ ಕೊನೆಯ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆಂಕಿ-ಬಿರುಗಾಳಿ ಎಂಟ್ರಿ..!
ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಿಂದ ಶಾರ್ದೂಲ್ ಠಾಕೂರ್ ಹಾಗೂ ಶುಭ್‌ಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ. ಇನ್ನು ಬುಮ್ರಾ-ಸಿರಾಜ್ ಹಾಗೂ ಶಮಿ ತ್ರಿವಳಿ ವೇಗಿಗಳಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.
ರಾಜ್‌ಕೋಟ್(ಸೆ.26): ಭಾರತ ಕ್ರಿಕೆಟ್ ತಂಡವು ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನತ್ತ ಚಿತ್ತ ನೆಟ್ಟಿದೆ. ಹೀಗಿರುವಾಗಲೇ ವಿಶ್ವಕಪ್‌ಗೂ ಮುನ್ನ ಕೊನೆಯ ಅಂತಾಷ್ಟ್ರೀಯ ಪಂದ್ಯವನ್ನಾಡಲು ರೆಡಿಯಾಗಿದೆ. ಸೆಪ್ಟೆಂಬರ್ 27ರಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡದ ಪಾಲಿಗೆ ಈ ಪಂದ್ಯ ಔಪಚಾರಿಕ ಪಂದ್ಯವೆನಿಸಿದೆಯಾದರೂ, ಈ ಪಂದ್ಯಕ್ಕೆ ಟೀಂ ಇಂಡಿಯಾಗೆ ಬೆಂಕಿ ಬಿರುಗಾಳಿಯ ಎಂಟ್ರಿಯಾಗಿದೆ.
ಹೌದು, ಆಸ್ಟ್ರೇಲಿಯಾ ಎದುರಿನ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ನಾಯಕ ರೋಹಿತ್ ಶರ್ಮಾ, ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಇನ್ನು ಇದೇ ವೇಳೆ ಕೊನೆಯ ಪಂದ್ಯವನ್ನು ಗೆದ್ದು ಅಪರೂಪದ ದಾಖಲೆ ಬರೆಯಲು ಟೀಂ ಇಂಡಿಯಾ ಎದುರು ನೋಡುತ್ತಿದೆ.
5 ಬಾರಿಯ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಎದುರು ಟೀಂ ಇಂಡಿಯಾ ಇದುವರೆಗೂ ಒಮ್ಮೆಯೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಲ್ಲ. ಇನ್ನು ಆಸ್ಟ್ರೇಲಿಯಾಗೆ ಕೂಡಾ ತವರಿನಲ್ಲಾಗಲಿ ಅಥವಾ ತವರಿನಲ್ಲಾಚೆಯಾಗಲಿ ಭಾರತದ ಎದುರು ಏಕದಿನ ಸರಣಿಯನ್ನು ವೈಟ್‌ವಾಷ್ ಮಾಡಲು ಸಾಧ್ಯವಾಗಿಲ್ಲ. ಆದರೆ ಇದೀಗ ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ವೈಟ್‌ವಾಷ್ ಮಾಡುವ ಸುವರ್ಣಾವಕಾಶ ಬಂದೊದಿಗಿದೆ. ಹೀಗಾಗಬೇಕಿದ್ದರೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.
ಒಂದು ವೇಳೆ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸಿದರೆ, ರೋಹಿತ್ ಶರ್ಮಾ ಪಡೆಯ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲಿದೆ. ಯಾಕೆಂದರೆ ಅಕ್ಟೋಬರ್ 08ರಂದು ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಮತ್ತೊಮ್ಮೆ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ.
ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆ, ಉಳಿದ ತಂಡಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ: ಎಬಿ ಡಿ ವಿಲಿಯರ್ಸ್ ಅಚ್ಚರಿಯ ಮಾತು
ಆಸ್ಟ್ರೇಲಿಯಾ ಎದುರಿನ ಮೂರನೇ ಏಕದಿನ ಪಂದ್ಯದಿಂದ ಶಾರ್ದೂಲ್ ಠಾಕೂರ್ ಹಾಗೂ ಶುಭ್‌ಮನ್ ಗಿಲ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ. ಇನ್ನು ಬುಮ್ರಾ-ಸಿರಾಜ್ ಹಾಗೂ ಶಮಿ ತ್ರಿವಳಿ ವೇಗಿಗಳಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.