ಡೆಲ್ಲಿ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ, ಕೆ.ಎಲ್. ರಾಹುಲ್‌ಗೆ ಕಾಂತಾರ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.
ನವದೆಹಲಿ: ತವರಿನಲ್ಲಿ ಅನುಭವಿಸಿದ್ದ ಡೆಲ್ಲಿ ಎದುರಿನ ಸೋಲಿಗೆ ಆರ್‌ಸಿಬಿ ಕೊನೆಗೂ ಪ್ರತಿಕಾರ ತೀರಿಸಿಕೊಂಡಿದೆ. ಗೆಲ್ಲಲು 163 ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಇನ್ನೂ 9 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರ ಜತೆಗೆ ಕನ್ನಡಿಗ ಕೆ ಎಲ್ ರಾಹುಲ್ ಎದುರೇ ವಿರಾಟ್ ಕೊಹ್ಲಿ ಕಾಂತಾರ ಸ್ಟೈಲ್ ರಿಕ್ರಿಯೇಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಈ ಪಂದ್ಯಕ್ಕೂ ಮೊದಲು ಏಪ್ರಿಲ್ 10ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತ್ತು. ಇನ್ನು ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ ಎಲ್ ರಾಹುಲ್(93) ಅಜೇಯ ಅರ್ಧಶತಕದ ನೆರವಿನಿಂದ 13 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ತಂಡವನ್ನು ಗೆಲುವಿನ ದಡ ಸೇರಿಸುತ್ತಿದ್ದಂತೆಯೇ ಲೋಕಲ್ ಬಾಯ್ ಕೆ ಎಲ್ ರಾಹುಲ್, ಚಿನ್ನಸ್ವಾಮಿ ಮೈದಾನದಲ್ಲೇ ʼಒಂದು ವೃತ್ತ ಬರೆದು, ಇದು ನನ್ನ ನೆಲʼ ಎಂದು ಸನ್ನೆ ಮಾಡಿದ್ದರು.
ಇದಾದ ಬಳಿಕ ಪ್ರತಿಕ್ರಿಯೆ ನೀಡಿದ್ದ ರಾಹುಲ್, “ನಾನು ಕಾಂತಾರ ಸಿನಿಮಾ ನೋಡಿದ್ದೆ. ಅದು ನನ್ನ ಫೇವರಿಟ್ ಸಿನಿಮಾ. ಈ ಮೈದಾನ ನನಗೆ ತುಂಬ ವಿಶೇಷವಾದುದು. ಅಲ್ಲಿನ ದೃಶ್ಯವನ್ನು ನಾನು ಇಲ್ಲಿ ಮಾಡಿದ್ದೇನೆ. ನಾನು ಬೆಳೆದಿದ್ದೆಲ್ಲವೂ ಇಲ್ಲಿಯೇ. ಇದು ನನ್ನ ಗ್ರೌಂಡ್, ನನ್ನದು ಅಂತ ನೆನಪಿಸೋಕೆ ಹೀಗೆ ಮಾಡಿದೆ” ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಇದೀಗ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ವಿರಾಟ್ ಕೊಹ್ಲಿ ಪಾಲಿಗೆ ತವರಿನ ಮೈದಾನವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ, ಯಾವ ರೀತಿ ಆಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಗೆಲ್ಲಲು 163 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ 26 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಗಿತ್ತು. ಈ ವೇಳೆ ನಾಲ್ಕನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ 119 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪ ತಂದು ನಿಲ್ಲಿಸಿದರು.
ತವರಿನ ಮೈದಾನದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಆಕರ್ಷಕ 51 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮ್ಯಾಚ್ ಫಿನಿಶರ್ ವಿರಾಟ್ ಕೊಹ್ಲಿ ಕೂಡಾ ತಂಡವನ್ನು ಗೆಲ್ಲಿಸಿ ಇದು ನನ್ನ ಮೈದಾನ ಎಂದು ಕಾಂತಾರ ಸ್ಟೈಲ್ ಮಾಡುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಕೊಹ್ಲಿ ಆರ್‌ಸಿಬಿ ಗೆಲ್ಲಲು ಕೇವಲ 18 ರನ್ ಅಗತ್ಯವಿದ್ದಾಗ ದುಸ್ಮಂತ್ ಚಮೀರಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ಇನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಮುಖಾಮುಖಿಯಾದಾಗ ಡೆಲ್ಲಿ ಬಾಯ್ ವ ವಿರಾಟ್ ಕೊಹ್ಲಿ, ರಾಹುಲ್‌ಗೆ ಕಾಂತಾರ ಸ್ಟೈಲ್ ರಿಕ್ರಿಯೇಟ್ ಮಾಡುವ ಮೂಲಕ ಬೆಂಗಳೂರಿನ ಸೆಲಿಬ್ರೇಷನ್ ನೆನಪಿಸಿದರು.
ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್: ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸಿದ್ದ ವಿರಾಟ್ ಕೊಹ್ಲಿ, ಇದೀಗ ಮತ್ತೊಮ್ಮೆ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇದೀಗ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಕೊಹ್ಲಿ 10 ಪಂದ್ಯಗಳನ್ನಾಡಿ 443 ರನ್ ಸಿಡಿಸಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್ 10 ಪಂದ್ಯಗಳನ್ನಾಡಿ 427 ರನ್ ಬಾರಿಸಿದ್ದಾರೆ.
