* ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ* ವಿರಾಟ್ ಕೊಹ್ಲಿ ಬಗ್ಗೆ ಕಠಿಣ ನಿಲುವು ತಳೆಯುವಂತೆ ಸೂಚಿಸಿದ ಅಜಯ್ ಜಡೇಜಾ* ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲೂ ಕೊಹ್ಲಿ ಫೇಲ್
ಬರ್ಮಿಂಗ್‌ಹ್ಯಾಮ್(ಜು.10): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಜುಲೈ 09ರಂದು ಇಂಗ್ಲೆಂಡ್ ಎದುರು ಮೊದಲ ಟಿ20 ಪಂದ್ಯವನ್ನಾಡಿದರು. ಇಲ್ಲಿನ ಎಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ರನ್ ಬಾರಿಸಿ ರಿಚರ್ಡ್ ಗ್ಲೀಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು. ವಿರಾಟ್ ಕೊಹ್ಲಿ, ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದೀಗ ಅಜಯ್ ಜಡೇಜಾ ಕೂಡಾ ಕೊಹ್ಲಿ ಪ್ರದರ್ಶನದ ಕುರಿತಂತೆ ಕಿಡಿಕಾರಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ (Virat Kohli), ಕಳೆದ ಕೆಲ ಸಮಯದಿಂದ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದು ವಿರಾಟ್ ಮೇಲೆ ಮತ್ತಷ್ಟು ಒತ್ತಡ ಬೀಳುವಂತೆ ಮಾಡಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 3297 ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 98 ಪಂದ್ಯಗಳನ್ನಾಡಿ 50.72ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ.
ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದ ಕುರಿತಂತೆ ಮಾತನಾಡಿರುವ ಅಜಯ್ ಜಡೇಜಾ (Ajay Jadeja), ಇದೇ ಪಂದ್ಯವನ್ನು ನಾವು ಇನ್ನೊಂದು ರೀತಿಯಲ್ಲಿ ಆಡಬಹುದಾಗಿತ್ತು. ನೀವು ಆ ಪಂದ್ಯದಲ್ಲಿ 180-200 ರನ್ ಬಾರಿಸಬಹುದಿತ್ತು. ನಾವು ಹೇಗೆ ಆಡಬೇಕು ಎನ್ನುವುದನ್ನು ನಾಯಕರಾದ ರೋಹಿತ್ ಶರ್ಮಾ (Rohit Sharma) ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಜಡೇಜಾ ಸೋನಿ ಸ್ಪೋರ್ಟ್ಸ್‌ಗೆ ನೀಡಿದ ಕ್ರಿಕೆಟ್ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ದದ ಎರಡನೇ ಟಿ20 ಪಂದ್ಯಕ್ಕೆ ಫಾರ್ಮ್‌ನಲ್ಲಿದ್ದ ದೀಪಕ್ ಹೂಡಾ ಅವರನ್ನು ಹೊರಗಿಟ್ಟು ವಿರಾಟ್ ಕೊಹ್ಲಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಕೊಹ್ಲಿ ಫಾರ್ಮ್ ಕುರಿತಂತೆ ಮಾತನಾಡಿರುವ ಅಜೇಯ್ ಜಡೇಜಾ, ಭಾರತ ಕ್ರಿಕೆಟ್ ತಂಡವನ್ನು ನಾನೇನಾದರೂ ಆಯ್ಕೆ ಮಾಡಿದರೇ ಅಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನವಿರುವುದಿಲ್ಲ ಎಂದು ಹೇಳಿದ್ದಾರೆ.
ಕೊಹ್ಲಿ ಈಗ ತಂಡಕ್ಕೆ ಹೊರೆ: ವಿರಾಟ್ ಬಗ್ಗೆ ಪಾಕ್ ಕ್ರಿಕೆಟಿಗನ ಅಚ್ಚರಿ ಹೇಳಿಕೆ!
ವಿರಾಟ್ ಕೊಹ್ಲಿಯ ಕುರಿತಂತೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಿದೆ. ವಿರಾಟ್ ಕೊಹ್ಲಿ ಅಗ್ರಕ್ರಮಾಂಕದಲ್ಲಿ ಬಲಾಢ್ಯ ಪ್ರದರ್ಶನ ತೋರಬೇಕಿದ್ದರೇ ಹಳೆಯ ರೀತಿಯಲ್ಲಿ ಬ್ಯಾಟ್ ಬೀಸಬೇಕು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಗ್ರಕ್ರಮಾಂಕದಲ್ಲಿ ತಂಡಕ್ಕೆ ಒಳ್ಳೆಯ ಅಡಿಪಾಯ ಹಾಕಿ ಕೊಡಬೇಕು. ಇನ್ನು ಕೊನೆಯ 4 ಓವರ್‌ನಲ್ಲಿ 60 ರನ್ ಕಲೆಹಾಕುವಂತಹ ಧೋನಿಯಂತಹ ಆಟಗಾರರು ತಂಡದಲ್ಲಿರಬೇಕು. ಇದು ಯಾರನ್ನು ತಂಡದೊಳಗೆ ಆಡಿಸುತ್ತೀರಾ ಎನ್ನುವುದನ್ನು ಅವಲಂಭಿಸಿರುತ್ತದೆ. ನಿಮ್ಮ ಮುಂದೆ ಆಯ್ಕೆಗಳಿದ್ದಾಗ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನಾನೇನಾದರು ಟಿ20 ತಂಡವನ್ನು ಆಯ್ಕೆ ಮಾಡಿದರೇ, ವಿರಾಟ್ ಕೊಹ್ಲಿ ಅಲ್ಲಿರುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.
ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ 2019ರಿಂದೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಯಶಸ್ವಿಯಾಗಿಲ್ಲ. ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಒಮ್ಮೆಯೂ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಿಲ್ಲ. ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಯೂ ಕೊಹ್ಲಿ ಬ್ಯಾಟಿಂದ ದೊಡ್ಡ ಮೊತ್ತ ಮೂಡಿ ಬಂದಿರಲಿಲ್ಲ.
