ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಪೋರ್ಚುಗಲ್‌ಗೆ ಕ್ವಾರ್ಟರ್ ಫೈನಲ್‌ನಲ್ಲೇ ಆಘಾತಕಾರಿ ಸೋಲುಮೊರಾಕ್ಕೊ ಎದುರಿನ ಸೋಲಿನ ಬೆನ್ನಲ್ಲೇ ಕ್ರಿಸ್ಟಿಯಾನೋ ರೊನಾಲ್ಡೋ ವೃತ್ತಿಬದುಕು ಅಂತ್ಯ?ರೊನಾಲ್ಡೋ ಪರ ಬ್ಯಾಟ್ ಬೀಸಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ

ಢಾಕಾ(ಡಿ.12): ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡವು ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮೊರಾಕ್ಕೊ ಎದುರು ಆಘಾತಕಾರಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಫಿಫಾ ವಿಶ್ವಕಪ್ ಗೆಲ್ಲುವ ಕ್ರಿಸ್ಟಿಯಾನೋ ರೊನಾಲ್ಡೋ ಕನಸು ಭಗ್ನವಾಗಿದೆ. ಈ ಸೋಲಿನೊಂದಿಗೆ ರೊನಾಲ್ಡೋ ಅವರ ಅಂತಾರಾಷ್ಟ್ರೀಯ ಫುಟ್ಬಾಲ್ ಬದುಕು ಅಂತ್ಯವಾಗಿದೆ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ

ಯೂಸುಫ್‌ ಎನ್‌-ನೆಸ್ರಿ ಬಾನೆತ್ತರಕ್ಕೆ ಜಿಗಿದು ಮನಮೋಹಕ ಹೆಡ್ಡರ್‌ ಮೂಲಕ ಬಾರಿಸಿದ ಗೋಲು ಮೊರಾಕ್ಕೊವನ್ನು ಫಿಫಾ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ಗೇರಿಸಿತು. ಕ್ವಾರ್ಟರ್‌ ಫೈನಲ್‌ನಲ್ಲಿ ಪೋರ್ಚುಗಲ್‌ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿದ ಮೊರಾಕ್ಕೊ, ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ಸ್ಪೇನ್‌, ಬ್ರೆಜಿಲ್‌ ಬಳಿಕ ವಿಶ್ವಕಪ್‌ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಪೋರ್ಚುಗಲ್‌ ಸಹ ಆಘಾತಕಾರಿ ಸೋಲಿನ ಬಳಿಕ ಟೂರ್ನಿಗೆ ವಿದಾಯ ಹೇಳಿದೆ. ಪ್ರಿ ಕ್ವಾರ್ಟರ್‌ನಲ್ಲಿ 6-1 ಗೋಲುಗಳ ಅಬ್ಬರದ ಜಯ ಸಾಧಿಸಿ ಮೆರೆದಿದ್ದ ಪೋರ್ಚುಗಲ್‌, ಮೊರಾಕ್ಕೊ ರಕ್ಷಣಾ ಪಡೆಯನ್ನು ಭೇದಿಸಿ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.

FIFA World Cup ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನೇಯ್ಮರ್‌ ಜೂನಿಯರ್‌ ಗುಡ್‌ಬೈ?

ಇದೀಗ ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ನೀವು ಈ ಕ್ರೀಡೆಯಲ್ಲಿ ಏನು ಸಾಧಿಸಿದ್ದೀರಾ ಎನ್ನುವುದನ್ನು ಯಾವುದೇ ಟ್ರೋಫಿ ಅಥವಾ ಬಿರುದುಗಳಿಂದ ಅಳೆಯಲು ಸಾಧ್ಯವಿಲ್ಲ. ಯಾವ ಟ್ರೋಫಿಯು ನೀವು ಜನರ ಮೇಲೆ ಬೀರಿದ ಪರಿಣಾಮವನ್ನು ವಿವರಿಸಲು ಸಾಧ್ಯವಿಲ್ಲ. ನನ್ನನ್ನು ಸೇರಿದಂತೆ ಜಗತ್ತಿನಾದ್ಯಂತ ನಿಮ್ಮ ಆಟವನ್ನು ನೋಡುವಾಗ ನಮಗೆಲ್ಲ ಅನಿಸುವುದು, ನೀವೊಬ್ಬರು ದೇವರ ಕೊಡುಗೆ" ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

"ನೀವು ಪ್ರತಿ ಬಾರಿ ಆಡುವಾಗಲೂ ತನ್ನ ಹೃದಯದಿಂದ ಆಡುವ ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದ ಪ್ರತಿರೂಪದಂತೆ ಕಾಣುತ್ತೀರ. ಯಾವುದೇ ಕ್ರೀಡಾಪಟುವಿನ ಪಾಲಿಗೆ ನೀವೊಬ್ಬ ಸ್ಪೂರ್ತಿಯ ಚಿಲುಮೆಯಾಗಿದ್ದೀರ. ನನ್ನ ಪಾಲಿಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ" ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

Scroll to load tweet…

ವಿಶ್ವಕಪ್‌ ಗೆಲ್ಲದೇ ರೊನಾಲ್ಡೋ ವಿದಾಯ?

ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆನಿಸಿರುವ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್‌ ಗೆಲ್ಲದೇ ತಮ್ಮ ವೃತ್ತಿಬದುಕು ಮುಕ್ತಾಯಗೊಳಿಸುವುದು ಬಹುತೇಕ ಖಚಿತ. ರೊನಾಲ್ಡೋಗೀಗ 37 ವರ್ಷ ವಯಸ್ಸು. ಅವರೀಗಾಗಲೇ ತಮ್ಮ ವೃತ್ತಿಬದುಕಿನ ಕೊನೆಯ ಹಂತದಲ್ಲಿದ್ದಾರೆ. ಮುಂದಿನ ವಿಶ್ವಕಪ್‌ ವೇಳೆಗೆ ಅವರಿಗೆ 41 ವರ್ಷ ವಯಸ್ಸಾಗಲಿದ್ದು, ಮತ್ತೊಂದು ವಿಶ್ವಕಪ್‌ ಆಡುವುದು ತೀರಾ ಅನುಮಾನ.

ರೊನಾಲ್ಡೋ ಮೇಲೆ ನೀರೆರೆಚಿದ ವ್ಯಕ್ತಿ!

ದೋಹಾ: ಮೊರಾಕ್ಕೊ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲಾರ್ಧದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕಣಕ್ಕಿಳಿದಿರಲಿಲ್ಲ. ಮೀಸಲು ಆಟಗಾರನಾಗಿದ್ದ ರೊನಾಲ್ಡೋ ಅತ್ತಿತ್ತ ಓಡಾಡುವಾಗ ವ್ಯಕ್ತಿಯೊಬ್ಬ ಅವರ ಮೇಲೆ ನೀರೆರೆಚಿ ಅನುಚಿತವಾಗಿ ವರ್ತಿಸಿದ ಪ್ರಸಂಗ ನಡೆಯಿತು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಕ್ರೀಡಾಂಗಣದಿಂದ ಹೊರಹಾಕಿದರು.