ಆರ್‌ಸಿಬಿ ಗುರುವಾರ ಹೊಸ ನಾಯಕನನ್ನು ಪ್ರಕಟಿಸಲಿದೆ. ಕೊಹ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಕಡಿಮೆ. ರಜತ್ ಪಾಟೀದಾರ್ ಮತ್ತು ಕೃನಾಲ್ ಪಾಂಡ್ಯ ಪ್ರಮುಖ ಆಯ್ಕೆಗಳು. ಡು ಪ್ಲೆಸಿಸ್‌ರನ್ನು ಕೈಬಿಟ್ಟ ನಂತರ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶ ತಂಡಕ್ಕಿದೆ. ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಸಮತೋಲಿತ ತಂಡದೊಂದಿಗೆ ಆರ್‌ಸಿಬಿ ಕಪ್ ಗೆಲ್ಲುವ ಗುರಿ ಹೊಂದಿದೆ.

ಬೆಂಗಳೂರು: ಐಪಿಎಲ್‌ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ತಂಡ ಗುರುವಾರ ಹೊಸ ನಾಯಕನ ಹೆಸರು ಪ್ರಕಟಿಸಲಿದೆ. ಆದರೆ ತಂಡದ ಪ್ರಮುಖ ಆಟಗಾರ ವಿರಾಟ್‌ ಕೊಹ್ಲಿ ಮತ್ತೆ ನಾಯಕನಾಗಿ ನೇಮಕಗೊಳ್ಳುವ ಸಾಧ್ಯತೆಯಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಕಳೆದ 3 ಆವೃತ್ತಿಗಳಲ್ಲಿ ತಂಡವನ್ನು ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ ಮುನ್ನಡೆಸಿದ್ದರು. ಆದರೆ ಕಳೆದ ಬಾರಿ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಹೀಗಾಗಿ ವಿರಾಟ್‌ ಕೊಹ್ಲಿ ನಾಯಕತ್ವ ರೇಸ್‌ನಲ್ಲಿರುವ ಪ್ರಮುಖ ಆಟಗಾರ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಅವರು 2011ರಿಂದ 2023ರ ನಡುವೆ 143 ಪಂದ್ಯಗಳಿಗೆ ನಾಯಕರಾಗಿದ್ದರು. ಆದರೆ ಮತ್ತೆ ನಾಯಕರಾಗಲು ಕೊಹ್ಲಿ ನಿರಾಕರಿಸಿದ್ದು, ಯುವ ಆಟಗಾರರಿಗೆ ಹೊಣೆ ನೀಡಲು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೀಗಾಗಿ, ದೇಸಿ ಕ್ರಿಕೆಟ್‌ನಲ್ಲಿ ಮಧ್ಯ ಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವಿರುವ ರಜತ್‌ ಪಾಟೀದಾರ್‌ ನಾಯಕತ್ವದ ರೇಸ್‌ನಲ್ಲಿದ್ದಾರೆ. ಉಳಿದಂತೆ ಭುವನೇಶ್ವರ್‌ ಕುಮಾರ್‌, ಕೃನಾಲ್‌ ಪಾಂಡ್ಯ, ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌, ಲಿವಿಂಗ್‌ಸ್ಟೋನ್‌ ತಂಡದಲ್ಲಿರುವ ಪ್ರಮುಖರು.

ಅಹಮದಾಬಾದ್‌ನಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಶುಭ್‌ಮನ್ ಗಿಲ್‌!

ಈ ಪೈಕಿ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ದ್ವಿತಿಯಾರ್ಧದಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ರಜತ್ ಪಾಟೀದಾರ್‌ಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಜತ್ ಪಾಟೀದಾರ್ ಅವರ ಮೇಲೆ ವಿಶ್ವಾಸ ಇದ್ದಿದ್ದಕ್ಕಾಗಿಯೇ ಆರ್‌ಸಿಬಿ ಫ್ರಾಂಚೈಸಿಯು ಮಧ್ಯಪ್ರದೇಶ ಮೂಲದ ಆಟಗಾರನನ್ನು ಐಪಿಎಲ್ ಮೆಗಾ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಂಡಿತ್ತು. ಆರ್‌ಸಿಬಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಾನ್ವಿತ ಯುವ ಬ್ಯಾಟರ್ ಆಗಿರುವ ಪಾಟೀದಾರ್ ಬೆಂಗಳೂರು ತಂಡದ ನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕೊಹ್ಲಿ ಹಿಂದಿಕ್ಕಿ ಪಾಟೀದಾರ್ ನಾಯಕರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಏಷ್ಯಾದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!

ಇನ್ನೊಂದೆಡೆ ಕೃನಾಲ್ ಪಾಂಡ್ಯ ಕೂಡಾ ದೇಶಿ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಉಪಯುಕ್ತ ಬೌಲಿಂಗ್ ಆಲ್ರೌಂಡರ್ ಆಗಿರುವ ಕೃನಾಲ್ ಪಾಂಡ್ಯ ಅವರಿಗೆ ಆರ್‌ಸಿಬಿ ಫ್ರಾಂಚೈಸಿಯು ನಾಯಕತ್ವ ಪಟ್ಟ ಕಟ್ಟಿದರು ಅಚ್ಚರಿ ಪಡುವಂತಿಲ್ಲ. ಕೃನಾಲ್ ಪಾಂಡ್ಯ ಐಪಿಎಲ್‌ನಲ್ಲಿ ಅಪಾರವಾದ ಅನುಭವ ಹೊಂದಿದ್ದಾರೆ. ಇದರ ಜತೆಗೆ ಉತ್ತಮ ನಾಯಕತ್ವದ ಗುಣಗಳನ್ನು ಕೃನಾಲ್ ಪಾಂಡ್ಯ ಮೈಗೂಡಿಸಿಕೊಂಡಿದ್ದಾರೆ.

ಕಳೆದ 17 ಆವೃತ್ತಿಗಳಿಂದಲೂ ಐಪಿಎಲ್ ಆಡುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದೇ ಆರ್‌ಸಿಬಿ ತಂಡದ ಇದುವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದೆ. ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರಿದ್ದರೂ ಆರ್‌ಸಿಬಿ ತಂಡವು ಇದುವರೆಗೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದುತೂಗಿ ಸಮತೋಲಿನ ಆಟಗಾರರನ್ನೊಳಗೊಂಡ ತಂಡದೊಂದಿಗೆ 2025ರ ಐಪಿಎಲ್ ಟೂರ್ನಿಗೆ ಸಜ್ಜಾಗಿದೆ. ಹೊಸ ನಾಯಕನೊಂದಿಗೆ ಆರ್‌ಸಿಬಿ ತಂಡವು ಈ ಬಾರಿಯಾದರೂ ಕಪ್ ಗೆಲ್ಲಲು ಸಾಧ್ಯವಾಗುತ್ತಾ ಕಾದು ನೋಡಬೇಕಿದೆ.