ಏಷ್ಯಾದಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 4,000 ಅಂತಾರಾಷ್ಟ್ರೀಯ ರನ್ ಪೂರ್ಣಗೊಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆದರು. ಶುಭ್‌ಮನ್ ಗಿಲ್ ಏಕದಿನದಲ್ಲಿ ವೇಗವಾಗಿ 2,500 ರನ್ ಗಳಿಸಿದ ದಾಖಲೆ ನಿರ್ಮಿಸಿದರು ಮತ್ತು ಒಂದೇ ಕ್ರೀಡಾಂಗಣದಲ್ಲಿ ಮೂರು ಮಾದರಿಗಳಲ್ಲೂ ಶತಕ ಗಳಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಅಹಮದಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ 4,000 ರನ್ ಪೂರ್ಣಗೊಳಿಸಿದ ಭಾರತದ ಮೊದಲ ಹಾಗೂ ವಿಶ್ವದ 6ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಬುಧವಾರ 3ನೇ ಏಕದಿನದಲ್ಲಿ 52 ರನ್ ಸಿಡಿಸಿದ ಅವರು, ಇಂಗ್ಲೆಂಡ್ ವಿರುದ್ಧ ಒಟ್ಟಾರೆ ರನ್ ಗಳಿಕೆಯನ್ನು 4036ಕ್ಕೆ ಹೆಚ್ಚಿಸಿದರು. 28 ಟೆಸ್ಟ್ ಪಂದ್ಯಗಳಲ್ಲಿ 1,991, 21 ಟಿ20ಯಲ್ಲಿ 648 ಹಾಗೂ 38 ಏಕದಿನದಲ್ಲಿ 1,397 ರನ್ ಕಲೆಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧ ಒಟ್ಟಾರೆ 87 ಪಂದ್ಯನ್ನಾಡಿರುವ ಅವರು 8 ಶತಕ, 24 ಅರ್ಧಶತಕ ಬಾರಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್ ಗಳಿಸಿದ ದಾಖಲೆ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಹೆಸರಲ್ಲಿದೆ. ಅವರು 37 ಟೆಸ್ಟ್‌ಗಳಲ್ಲಿ 5,028 ರನ್ ಗಳಿಸಿದ್ದಾರೆ. ಆಸೀಸ್ ಕ್ರಿಕೆಟಿಗರಾದ ಅಲಾನ್ ಬಾರ್ಡರ್ 4,850, ಸ್ಟೀವ್ ಸ್ಮಿತ್ 4,815, ವೆಸ್ಟ್ಇಂಡೀಸ್‌ನ ವಿವಿನ್ ರಿಚರ್ಡ್ಸ್ 4,488, ರಿಕಿ ಪಾಂಟಿಂಗ್ 4,141 ರನ್ ಗಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ; ಭಾರತದ ಮ್ಯಾಚ್ ಯಾವಾಗ? ಎಲ್ಲಿ ವೀಕ್ಷಿಸಬಹುದು?
ಏಷ್ಯಾದಲ್ಲಿ ದಾಖಲೆ: ಕೊಹ್ಲಿ ಏಷ್ಯಾದಲ್ಲಿ ಆಡಿದ ಅಂ.ರಾ. ಪಂದ್ಯಗಳಲ್ಲಿ ವೇಗವಾಗಿ 16,000 ರನ್ ಪೂರ್ಣಗೊಳಿಸಿದ ಆಟಗಾರ. ಕೇವಲ 340 ಇನ್ನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. ಸಚಿನ್ 353 ಇನ್ನಿಂಗ್ಸ್‌ಗಳಲ್ಲಿ 16,000 ರನ್ ಕಲೆಹಾಕಿದ್ದರು. ಲಂಕಾದ ಸಂಗಕ್ಕರ, ಜಯವರ್ಧನೆ ಈ ಸಾಧನೆ ಮಾಡಿದ ಇನ್ನಿಬ್ಬರು.
ವೇಗದ 2500 ರನ್: ಗಿಲ್ ದಾಖಲೆ!
ಅಹಮದಾಬಾದ್: ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 2500 ರನ್ ಪೂರೈಸಿದ ಬ್ಯಾಟರ್ ಎನ್ನುವ ದಾಖಲೆಯನ್ನು ಭಾರತದ ಶುಭ್‌ಮನ್ ಗಿಲ್ ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಗಿಲ್ ಈ ದಾಖಲೆ ನಿರ್ಮಿಸಿದರು. ಕೇವಲ 50 ಇನ್ನಿಂಗ್ಸ್‌ಗಳಲ್ಲಿ ಅವರು ಈ ಮೈಲುಗಲ್ಲು ತಲುಪಿದರು. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಹಾಶಿಂ ಆಮ್ಲಾ (51 ಇನ್ನಿಂಗ್ಸ್) ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಮುರಿದರು. ಪಾಕಿಸ್ತಾನದ ಇಮಾಮ್-ಉಲ್-ಹಕ್ 52 ಇನ್ನಿಂಗ್ಸ್‌ಗಳಲ್ಲಿ 2500 ರನ್ ಪೂರೈಸಿದ್ದರು. ಅವರು ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ಇನ್ನು, ಏಕದಿನದ ಆರಂಭಿಕ 50 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಗಿಲ್ ಅಗ್ರಸ್ಥಾನಕ್ಕೇರಿದ್ದಾರೆ. ಅವರು 2587 ರನ್ ಗಳಿಸಿದ್ದಾರೆ. ಹಾಶಿಂ ಆಮ್ಲಾ 2486, ಪಾಕ್‌ನ ಇಮಾಮ್ 2386, ಫಖರ್ ಜಮಾನ್ 2262 ರನ್ ಗಳಿಸಿದ್ದರು.
ಅಹಮದಾಬಾದ್‌ನಲ್ಲಿ ಶತಕ ಸಿಡಿಸಿ ಹೊಸ ದಾಖಲೆ ಬರೆದ ಶುಭ್‌ಮನ್ ಗಿಲ್!
ಕ್ರೀಡಾಂಗಣವೊಂದರಲ್ಲಿ 3 ಮಾದರಿಯಲ್ಲೂ ಶತಕ: ಗಿಲ್ ಐದನೇ ಬ್ಯಾಟರ್!
ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಕ್ರೀಡಾಂಗಣವೊಂದರಲ್ಲಿ ಅಂ.ರಾ. ಶತಕ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಎನ್ನುವ ಹಿರಿಮೆಗೆ ಶುಭ್‌ಮನ್ ಗಿಲ್ ಪಾತ್ರರಾಗಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಗಿಲ್‌ಗೂ ಮುನ್ನ ಸೆಂಚೂರಿಯನ್‌ನಲ್ಲಿ ಕ್ವಿಂಟನ್ ಡಿ ಕಾಕ್, ಕರಾಚಿಯಲ್ಲಿ ಬಾಬರ್ ಆಜಂ, ಅಡಿಲೇಡ್‌ನಲ್ಲಿ ಡೇವಿಡ್ ವಾರ್ನರ್, ಜೋಹಾನ್ಸ್‌ಬರ್ಗ್‌ನಲ್ಲಿ ಫಾಫ್ ಡು ಪ್ಲೆಸಿ ಮೂರೂ ಮಾದರಿಯ ಶತಕ ಸಿಡಿಸಿದ್ದರು.
07ನೇ ಬ್ಯಾಟರ್: ಗಿಲ್ ಏಕದಿನದ 3 ಪಂದ್ಯಗಳ ಸರಣಿಯ ಎಲ್ಲಾ ಪಂದ್ಯದಲ್ಲೂ 50+ ರನ್ ಗಳಿಸಿದ ಭಾರತದ 7ನೇ ಆಟಗಾರ.