ನಾಗ್ಪುರದಲ್ಲಿ ಭಾರತ-ಇಂಗ್ಲೆಂಡ್ ಮೂರು ಏಕದಿನ ಸರಣಿ ಆರಂಭ. ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಮೊಣಕಾಲು ಗಾಯದಿಂದ ವಿರಾಟ್ ಕೊಹ್ಲಿ ಮೊದಲ ಪಂದ್ಯಕ್ಕೆ ಅಲಭ್ಯ. ಜೈಸ್ವಾಲ್ ಮತ್ತು ಹರ್ಷಿತ್ ರಾಣಾ ಏಕದಿನಕ್ಕೆ ಪಾದಾರ್ಪಣೆ. ಇಂಗ್ಲೆಂಡ್ 41 ವರ್ಷಗಳ ಬಳಿಕ ಭಾರತದಲ್ಲಿ ಸರಣಿ ಗೆಲ್ಲುವ ಗುರಿಯಲ್ಲಿದೆ.

ನಾಗ್ಪುರ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಮೊದಲ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ.

ಹೌದು, ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಒಂದು ರೀತಿಯ ಅಭ್ಯಾಸದ ಸರಣಿ ಎನಿಸಿಕೊಂಡಿರುವ ಈ ಮೂರು ಪಂದ್ಯಗಳ ಸರಣಿಯು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಇದೀಗ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದರು. ಆದರೆ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಏಕದಿನ ಪಂದ್ಯಕ್ಕೆ ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಬಲಮೊಣಕಾಲಿನ ಗಾಯಕ್ಕೆ ಒಳಗಾಗಿರುವ ವಿರಾಟ್ ಕೊಹ್ಲಿ ದುರಾದೃಷ್ಟವಶಾತ್ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಇದೇ ವೇಳೆ ವೇಗದ ಬೌಲರ್ ಹರ್ಷಿತ್ ರಾಣಾ ಕೂಡಾ ಏಕದಿನ ಕ್ರಿಕೆಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದಾರೆ.

ಭಾರತದಲ್ಲಿ 1984ರಿಂದ ಸರಣಿ ಗೆದ್ದಿಲ್ಲ ಇಂಗ್ಲೆಂಡ್‌

ಇಂಗ್ಲೆಂಡ್‌ ತಂಡ ಭಾರತದಲ್ಲಿ 41 ವರ್ಷ ಬಳಿಕ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‌ ತಂಡ 1984-85ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ 4-1 ಗೆಲುವು ಸಾಧಿಸಿತ್ತು. ಆ ಬಳಿಕ ಒಮ್ಮೆಯೂ ಸರಣಿ ಗೆದ್ದಿಲ್ಲ. ಕೊನೆ ಬಾರಿ 2020-21ರಲ್ಲಿ ಉಭಯ ತಂಡಗಳ ನಡುವೆ ಭಾರತದಲ್ಲಿ ಸರಣಿ ನಡೆದಿತ್ತು. ಭಾರತ 2-1 ಜಯಗಳಿಸಿತ್ತು.

11ನೇ ಸರಣಿ: ಇದು 2 ತಂಡಗಳ ನಡುವೆ ಭಾರತದಲ್ಲಿ ನಡೆಯಲಿರುವ 11ನೇ ಸರಣಿ. ಈ ವರೆಗೂ ಭಾರತ 7ರಲ್ಲಿ, ಇಂಗ್ಲೆಂಡ್‌ 1ರಲ್ಲಿ ಜಯಗಳಿಸಿದೆ. 2 ಸರಣಿ ಡ್ರಾಗೊಂಡಿವೆ.

ಒಟ್ಟು ಮುಖಾಮುಖಿ: 107

ಭಾರತ: 58

ಇಂಗ್ಲೆಂಡ್‌: 44

ಟೈ: 02

ಫಲಿತಾಂಶವಿಲ್ಲ: 03

ಮೊದಲ ಏಕದಿನ ಪಂದ್ಯಕ್ಕೆ ತಂಡಗಳು ಹೀಗಿವೆ:

ಭಾರತ:
ರೋಹಿತ್ ಶರ್ಮಾ(ನಾಯಕ) ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭ್‌ಮನ್ ಗಿಲ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

ಇಂಗ್ಲೆಂಡ್
ಬೆನ್‌ ಡಕೆಟ್‌, ಫಿಲ್‌ ಸಾಲ್ಟ್‌, ಜೋ ರೂಟ್‌, ಹ್ಯಾರಿ ಬ್ರೂಕ್‌, ಜೋಸ್ ಬಟ್ಲರ್‌(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಕೊಬ್ ಬೆಥೆಲ್‌, ಕಾರ್ಸ್‌, ಜೋಫ್ರಾ ಆರ್ಚರ್‌, ಆದಿಲ್ ರಶೀದ್‌, ಸಾಕಿಬ್‌ ಮೊಹಮದ್.