Asianet Suvarna News Asianet Suvarna News

ವಿರಾಟ್ ಕೊಹ್ಲಿ ಭೇಟಿಯಾದ "Maaro Mujhe" ಖ್ಯಾತಿಯ ಪಾಕಿಸ್ತಾನ ಅಭಿಮಾನಿ..!

ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ
ಪಾಕಿಸ್ತಾನ ಎದುರು 5 ವಿಕೆಟ್‌ಗಳ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಪಡೆ
ಮಾರೋ ಮುಜೆ ಖ್ಯಾತಿಯ ಪಾಕಿಸ್ತಾನ ಅಭಿಮಾನಿ ಭೇಟಿಯಾದ ವಿರಾಟ್ ಕೊಹ್ಲಿ
 

Virat Kohli Meets Maaro Mujhe Maaro Fame Fan Momin Saqib After Team India Win Over Pakistan In Asia Cup 2022 kvn
Author
First Published Aug 30, 2022, 1:52 PM IST

ದುಬೈ(ಆ.30): ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಏಷ್ಯಾಕಪ್‌ ಟೂರ್ನಿಯ ಪಂದ್ಯವು ಕ್ರಿಕೆಟ್ ಅಭಿಮಾನಿಗಳನ್ನು ಕೊನೆಯ ಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಕೊನೆಯ ಓವರ್‌ವರೆಗೂ ಸಾಗಿದ ಪಂದ್ಯವು ಎರಡು ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ 5 ವಿಕೆಟ್‌ಗಳ ಅಂತರದ ರೋಚಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಂದ್ಯದುದ್ದಕ್ಕೂ ಎರಡೂ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ ಪಂದ್ಯ ವೀಕ್ಷಿಸಿದ ಅಭಿಮಾನಿಗಳಿಗೂ ಭರಪೂರ ಮನರಂಜನೆ ಸಿಕ್ಕಿತು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ 3 ಎಸೆತಗಳಲ್ಲಿ 6 ರನ್‌ಗಳ ಅಗತ್ಯವಿದ್ದಾಗ ಆಕರ್ಷಕ ಸಿಕ್ಸರ್ ಸಿಡಿಸುವ ಮೂಲಕ ಟೀಂ ಇಂಡಿಯಾಗೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಪಂದ್ಯವೆಂದರೇ ಹಾಗೆ, ಅಲ್ಲಿ ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ಇರುತ್ತದೆ. ಆದರೆ ಅದೇ ಪಂದ್ಯ ಮುಕ್ತಾಯದ ಬಳಿಕ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕ್ರೀಡಾಸ್ಪೂರ್ತಿ ಮೆರೆಯುವುದನ್ನು ನಾವೆಲ್ಲರೂ ನೋಡಿದ್ದೇವೆ. ಅದೇ ರೀತಿ ಭಾರತಕ್ಕೆ ಗೆಲುವು ತಂದುಕೊಟ್ಟ ಹಾರ್ದಿಕ್‌ ಪಾಂಡ್ಯ, ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಅಪ್ಪಿಕೊಂಡರು. 

ಇನ್ನು ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನದ ಸೋಷಿಯಲ್ ಮೀಡಿಯಾ ತಾರೆ 'ಮಾರೋ ಮುಜೆ ಮಾರೋ' ಖ್ಯಾತಿಯ ಮೊಮಿನ್‌ ಸಕೀಬ್ ಅವರನ್ನು ಭೇಟಿಯಾಗಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಯಾರೂ 'ಮಾರೋ ಮುಜೆ ಮಾರೋ' ಖ್ಯಾತಿಯ ಮೊಮಿನ್ ಹಕ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‌ಗಳ ಅಂತರದ ಗೆಲುವು ದಾಖಲಿಸಿತ್ತು.

Asia Cup 2022 ಡಿಜಿಟಲ್‌ ವೀಕ್ಷಣೆ: ದಾಖಲೆ ಪ್ರಮಾಣದಲ್ಲಿ ಭಾರತ-ಪಾಕ್‌ ಪಂದ್ಯ ವೀಕ್ಷಣೆ..!

ಈ ಸೋಲಿನ ಬಳಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಮೊಮಿನ್ ಸಕೀಬ್‌, ಪಾಕಿಸ್ತಾನ ತಂಡದೊಳಗೆ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಈ ಬಾರಿ ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸುತ್ತದೆ ಎಂದು ಆಸೆಯಿಂದ ಪಂದ್ಯ ವೀಕ್ಷಿಸಲು ಬಂದಿದ್ದೆವು. ಆದರೆ ಭಾರತ ಎದುರು ಕನಿಷ್ಠ ಹೋರಾಟವನ್ನು ಪಾಕಿಸ್ತಾನ ನೀಡಲಿಲ್ಲ. 'ಮಾರೋ ಮುಜೆ ಮಾರೋ' ಎಂದು ಪಾಕಿಸ್ತಾನ ಪ್ರದರ್ಶನದ ಬಗ್ಗೆ ತಮ್ಮ ಬೇಸರ ಹೊರಹಾಕಿದ್ದರು. ಈ 'ಮಾರೋ ಮುಜೆ ಮಾರೋ' ಎನ್ನುವ ಸಾಲು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಇನ್ನು ಏಷ್ಯಾಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಬಗ್ಗೆ ಮಾತನಾಡುವುದಾದರೇ, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡವು ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಮಾರಕ ದಾಳಿ ತತ್ತರಿಸಿ ಕೇವಲ 147 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯು ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

Follow Us:
Download App:
  • android
  • ios