ನವದೆಹಲಿ(ಮೇ.17): ಐಪಿಎಲ್‌ನಲ್ಲಿ ಆದ ಎಡವಟ್ಟಿನ ಬಳಿಕ ಬಿಸಿಸಿಐ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಲಿರುವ ಟೀಂ ಇಂಡಿಯಾ ಆಟಗಾರರು ಹಾಗೂ ಅವರ ಕುಟುಂಬ ಸದಸ್ಯರಿಗೆ ಅವರವರ ಮನೆಗಳಲ್ಲೇ 3 ಬಾರಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ.

ಮೂರೂ ಪರೀಕ್ಷೆಗಳ ವರದಿ ನೆಗೆಟಿವ್‌ ಬಂದರಷ್ಟೇ ಆಟಗಾರರು, ಕುಟುಂಬ ಸದಸ್ಯರು ಮೇ 19ರಂದು ಮುಂಬೈಗೆ ಆಗಮಿಸಲಿದ್ದು, ಅಲ್ಲಿ ಬಿಸಿಸಿಐ ಸಿದ್ಧಪಡಿಸಿರುವ ಬಯೋ ಬಬಲ್‌ ಪ್ರವೇಶಿಸಲಿದ್ದಾರೆ. 14 ದಿನಗಳ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿರುವ ಆಟಗಾರರು, ಕುಟುಂಬಸ್ಥರು ಸುಮಾರು 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಎಲ್ಲಾ ಪರೀಕ್ಷೆಗಳ ವರದಿಯು ನೆಗೆಟಿವ್‌ ಬಂದರಷ್ಟೇ ಜೂ.2ರಂದು ಇಂಗ್ಲೆಂಡ್‌ಗೆ ವಿಮಾನ ಹತ್ತಲು ಅವಕಾಶ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಒಟ್ಟು 6 ಟೆಸ್ಟ್‌ ಪಂದ್ಯಗಳನ್ನಾಡಲಿದೆ. ಈ ಪೈಕಿ ಜೂನ್ 18ರಿಂದ 22ರವರೆಗೆ ಸೌಥಾಂಪ್ಟನ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಎದುರು ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿದೆ. ಇದಾದ ಬಳಿಕ ಆಗಸ್ಟ್‌ 04ರಿಂದ ಆತಿಥೇಯ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದೆ.

3 RT-PCR ಟೆಸ್ಟ್, 14 ದಿನ ಕ್ವಾರಂಟೈನ್; ಇಂಗ್ಲೆಂಡ್ ತೆರಳಲಿರುವ ಟೀಂ ಇಂಡಿಯಾಗೆ ಕಠಿಣ ರೂಲ್ಸ್!

ಈಗಾಗಲೇ ತವರಿನಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಜಯಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಭಾರತ ತಂಡವು, ಇದೀಗ ಇಂಗ್ಲೆಂಡ್ ಪ್ರವಾಸದಲ್ಲೂ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ಇನ್ನೊಂದೆಡೆ ಭಾರತದ ಪ್ರವಾಸದಲ್ಲಿ ಅವಮಾನಕಾರಿ ಸೋಲು ಕಂಡು ಗಾಯಗೊಂಡ ಹುಲಿಯಂತಾಗಿರುವ ಬಲಿಷ್ಠ ಇಂಗ್ಲೆಂಡ್ ತಂಡವು ಭಾರತಕ್ಕೆ ತವರಿನಲ್ಲಿ ತಿರುಗೇಟು ನೀಡುವ ಲೆಕ್ಕಾಚಾರ ಮಾಡುತ್ತಿದೆ. ಒಟ್ಟಿನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಸಾಕಷ್ಟು ರೂಚಕತೆಯಿಂದ ಕೂಡಿರುವ ಸಾಧ್ಯತೆಯಿಂದ ಈ ಹೈವೋಲ್ಟೇಜ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.