ಸೋಲು, ಟ್ರೋಲು ಸೇರಿದಂತೆ ಎಲ್ಲವನ್ನು ನೋಡಿದ ಕೊಹ್ಲಿ 18ನೇ ವರ್ಷದಲ್ಲಿ ಟ್ರೋಫಿ ಸಿಹಿ ಕಂಡಿದ್ದಾರೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.

ಅಹಮ್ಮದಾಬಾದ್(ಜೂ.03) ಐಪಿಎಲ್ 2025 ಟೂರ್ನಿಗೆ ಆರ್‌ಸಿಬಿ ಚಾಂಪಿಯನ್. ಸೋಲು, ಗೆಲುವು, ಟ್ರೋಲ್, ಮುಖಭಂಗ ಸೇರಿದಂತ ಎಲ್ಲವನ್ನು ನೋಡಿದ ಆರ್‌‌ಸಿಬಿಯ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಆರ್‌ಸಿಬಿ ಮಾಲೀಕನಿಂದ ಹಿಡಿದು ಎಲ್ಲಾ ಆಟಗಾರರು ಬದಲಾಗಿದ್ದಾರೆ. ಮ್ಯಾನೇಜ್ಮೆಂಟ್, ಕೋಚ್, ಸ್ಟಾಫ್ ಎಲ್ಲರೂ ಬದಲಾಗಿದ್ದಾರೆ. ಆದರೆ ಮೊದಲ ಆವೃತ್ತಿಯಿಂದ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಆಡುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಟ್ರೋಫಿಗಾಗಿ ಹಾತೊರೆದಿದ್ದರು. ಇದೀಗ ಆರ್‌ಸಿಬಿ ಟ್ರೋಫಿ ಗೆದ್ದಿದೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ಕೊಹ್ಲಿ ಭಾವುಕರಾಗಿದ್ದಾರೆ. ಕೊನೆಯ ಎಸೆತದ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಶುರುವಾಗಿತ್ತು. ಆದರೆ ಕೊಹ್ಲಿ ಮೈದಾನಕ್ಕೆ ನಮಸ್ಕರಿಸಿದ್ದರು. ಇದೇ ವೇಳೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಅನುಷ್ಕಾ ತಬ್ಬಿಕೊಂಡ ಭಾವುಕರಾದ ಕೊಹ್ಲಿ

ಗೆಲುವಿನ ಬಳಿಕ ಮೈದಾನದಲ್ಲಿ ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆ ನಡೆಸಿದ್ದಾರೆ. ಇತ್ತ ಅಭಿನಂದನೆಗಳ ಸುರಿಮಳೆಯಾಗಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರು ಆರ್‌ಸಿಬಿ ಆಟಗಾರರ ಅಭಿನಂದಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ನೇರವಾಗಿ ಪತ್ನಿ ಅನುಷ್ಕಾ ಶರ್ಮಾ ಬಳಿ ಬಂದು ಅಪ್ಪಿಕೊಂಡಿದ್ದಾರೆ. ಅಳು ನಿಯಂತ್ರಿಸಿದ ಕೊಹ್ಲಿ ಗೆಲುವಿನ ಸಂತಸ ಹಂಚಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಕೊಹ್ಲಿಗೆ ಸಿಹಿ ಮುತ್ತು ನೀಡಿ ಅಭಿನಂದಿಸಿದ್ದಾರೆ.

Scroll to load tweet…

ಕೊನೆಯ ಓವರ್ ಜೋಶ್ ಹೇಜಲ್‌ವುಡ್ ನಿರೀಕ್ಷಿತವಾಗಿ ಬೌಲಿಂಗ್ ಮಾಡಿಲ್ಲ. ಶಶಾಂಕ್ ಸಿಂಗ್ ಸತತ ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ ಆರ್‌ಸಿಬಿ ಅದಾಗಲೇ ಗೆಲುವಿನ ಸನಿಹಕ್ಕೆ ಬಂದಿತ್ತು. ಕೊನೆಯ ಎಸೆತದಲ್ಲೂ ಶಶಾಂಕ್ ಸಿಂಗ್ ಸಿಕ್ಸರ್ ಸಿಡಿಸಿ ಪಂಜಾಬ್ ಸೋಲಿನ ಅಂತರ ಕಡಿಮೆ ಮಾಡಿತ್ತು. ಆದರೆ ಆರ್‌ಸಿಬಿ ಗೆಲುವಿನ ಸಂಭ್ರಮ ಆಚರಿಸಿತ್ತು. ಕೊಹ್ಲಿ ನಿಂತಲ್ಲೇ ಮೈದಾನ ತಲೆಬಾಗಿದರು. ಕೈಗಳಿಂದ ಮುಖ ಮುತ್ತಿ ಕಣ್ಣೀರಿಟ್ಟರು. ಭಾವುಕರಾದ ಕೊಹ್ಲಿ ನೋಡಿ ಕ್ರಿಕೆಟಿಗರು ಮಾತ್ರವಲ್ಲ ಅಭಿಮಾನಿಗಳು ಭಾವುಕರಾಗಿದ್ದರು.

ಗೆಲುವು ಸಂಭ್ರಮಿಸಿದ ಎಬಿ ಡಿವಿಲಿಯರ್ಸ್

ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸಂಭ್ರಮಿಸಿದ್ದಾರೆ. ಎಬಿ ಡಿವಿಲಿಯರ್ಸ್ ಕೂಡ ಭಾವುಕರಾಗಿದ್ದಾರೆ. ನಿಯಂತ್ರಿಸಿಕೊಂಡು ಇತರರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ತಬ್ಬಿಕೊಂಡು ಶುಭಾಶಯ ತಿಳಿಸಿದ ಕ್ರಿಸ್ ಗೇಲ್

ಆರ್‌ಸಿಬಿ ಫೈನಲ್ ಪಂದ್ಯ ವೀಕ್ಷಿಸಲು ಆರ್‌ಸಿಬಿ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಕೂಡ ಹಾಜರಿದ್ದರು. ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಕ್ರಿಕೆಟಿಗರ ತಬ್ಬಿಕೊಂಡ ಗೇಲ್ ಶುಭಾಶಯ ತಿಳಿಸಿದ್ದಾರೆ.