ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ, ವಿರಾಟ್ ಕೊಹ್ಲಿ ತಮ್ಮನ್ನು 'ವಿದೇಶಿ ಆಟಗಾರ' ಎಂದು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ಮಿಸ್ಟರ್ ನಾಗ್ಸ್ ಜೊತೆಗಿನ ಸಂದರ್ಶನದಲ್ಲಿ, "ನಾನೇನು ಫಾರಿನ್ ಪ್ಲೇಯರಾ?" ಎಂದು ಮರುಪ್ರಶ್ನಿಸಿದ ಅವರು, ಕಳೆದ ಸೀಸನ್‌ನ ಐಪಿಎಲ್ ಗೆಲುವಿನ ಭಾವನಾತ್ಮಕ ಕ್ಷಣಗಳ ಬಗ್ಗೆಯೂ ಮಾತನಾಡಿದ್ದಾರೆ.

ಬೆಂಗಳೂರು: ಈ ಬಾರಿಯ ಐಪಿಎಲ್ ಸೀಸನ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿ, ಕಪ್ ಉಳಿಸಿಕೊಳ್ಳುವ ಹೋರಾಟ ಆರಂಭಿಸಿದೆ. ಇದರ ಬೆನ್ನಲ್ಲೇ, ವಿರಾಟ್ ಕೊಹ್ಲಿ ತಮ್ಮ ವಿರುದ್ಧ ಎದ್ದಿದ್ದ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ಶಿಫ್ಟ್ ಆಗಿದ್ದರು. ಇದನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಅಭಿಮಾನಿಗಳು, 'ಆರ್‌ಸಿಬಿ ಐವರು ವಿದೇಶಿ ಆಟಗಾರರೊಂದಿಗೆ ಆಡುತ್ತಿದೆ' ಎಂದು ಕೊಹ್ಲಿಯನ್ನು ಗೇಲಿ ಮಾಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಕಾಕಾರರ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ

ಆದರೆ, ಆರ್‌ಸಿಬಿ ಅಭಿಮಾನಿ ಮಿಸ್ಟರ್ ನಾಗ್ಸ್ (ಡ್ಯಾನಿಶ್ ಸೇಠ್) ಜೊತೆಗಿನ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆ ಎದುರಾದಾಗ, ಕೊಹ್ಲಿ ನಗುತ್ತಲೇ ಉತ್ತರಿಸಿದರು. "ನನಗೆ ಗೊತ್ತಿಲ್ಲ, ಇದನ್ನ ಯಾಕೆ ನನ್ನ ಕೇಳ್ತಿದ್ದೀಯಾ? ಆರ್‌ಸಿಬಿಯಲ್ಲಿರುವ ವಿದೇಶಿ ಆಟಗಾರರನ್ನ ಹೋಗಿ ಕೇಳು. ನಾನು ವಿದೇಶಿ ಆಟಗಾರ ಅಲ್ಲ. ನಾನೇನು ಫಾರಿನ್ ಪ್ಲೇಯರಾ?" ಎಂದು ಕೊಹ್ಲಿ ಮಿಸ್ಟರ್ ನಾಗ್ಸ್‌ಗೆ ಮರುಪ್ರಶ್ನೆ ಹಾಕಿದರು.

ಹಲವು ವರ್ಷಗಳ ಕಾಯುವಿಕೆಯ ನಂತರ ಕಳೆದ ವರ್ಷ ಐಪಿಎಲ್ ಕಿರೀಟ ಗೆದ್ದಾಗ ತಮಗಾದ ಭಾವನಾತ್ಮಕ ಬದಲಾವಣೆಯ ಬಗ್ಗೆಯೂ ಕೊಹ್ಲಿ ಮನಬಿಚ್ಚಿ ಮಾತನಾಡಿದರು. "ವರ್ಷಗಳಿಂದ ಹೆಗಲ ಮೇಲಿದ್ದ ದೊಡ್ಡ ಭಾರವನ್ನು ಕೆಳಗಿಳಿಸಿದಂತೆ ಆ ದಿನ ಅನಿಸಿತು. ಆ ರಾತ್ರಿ ಎಲ್ಲವೂ ಹಗುರವಾಗಿತ್ತು," ಎಂದು ಕೊಹ್ಲಿ ಹೇಳಿದರು.

Scroll to load tweet…

"ಗೆಲುವು ಎನ್ನುವುದು ಕೇವಲ ಒಂದು ಕಪ್ ಅಲ್ಲ, ಅದು ವರ್ಷಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಫಲ" ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. "ಸೋಲಿನಿಂದ ಹಲವರು ಕಲಿಯುತ್ತಾರೆ, ಆದರೆ ಕೆಲವರು ನಿರಾಶರಾಗುತ್ತಾರೆ. ಆದರೆ, ದೊಡ್ಡ ಪ್ರಯತ್ನದ ನಂತರ ಗೆದ್ದಾಗ, ಅದು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಲು ಸ್ಫೂರ್ತಿ ನೀಡುತ್ತದೆ," ಎಂದು ಕೊಹ್ಲಿ ಸ್ಪಷ್ಟಪಡಿಸಿದರು. ಹೈದರಾಬಾದ್ ವಿರುದ್ಧದ ಸೀಸನ್‌ನ ಮೊದಲ ಪಂದ್ಯದಲ್ಲಿ ಕೊಹ್ಲಿ ಆರ್‌ಸಿಬಿಯ ಟಾಪ್ ಸ್ಕೋರರ್ ಆಗಿದ್ದರು. ಸೀಸನ್‌ನ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ನಾಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

18ನೇ ಸೀಸನ್‌ನಲ್ಲಿ ಟ್ರೋಫಿ ಬರ ನೀಗಿಸಿಕೊಂಡ ಆರ್‌ಸಿಬಿ:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಳೆದ 17 ಸೀಸನ್‌ಗಳನ್ನು ಆಡಿಯೂ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ತಂಡವು ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದು ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಟ್ರೋಫಿ ಬರ ನೀಗಿಸಿಕೊಂಡಿತ್ತು.