ಸಲಿಂಗಿ ಗೆಳತಿ ಜತೆ ಎಂಗೇಜ್ ಆದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ಡೇನಿಯಲ್ ವ್ಯಾಟ್, ಮಾಜಿ ನಾಯಕ ವಿರಾಟ್ ಕೊಹ್ಲಿ ಅಪ್ಪಟ ಅಭಿಮಾನಿಡೇನಿಯಲ್ ವ್ಯಾಟ್, ಇದೀಗ ಗೆಳತಿ ಜಾರ್ಜಿ ಹಾಡ್ಜ್ ಜತೆಗೆ ಎಂಗೇಟ್‌ಮೆಂಟ್
ಲಂಡನ್(ಮಾ.03): ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ ಗುರುವಾರ(ಮಾ.02)ದಂದು ಅಚ್ಚರಿ ಎನ್ನುವಂತೆ ಸಲಿಂಗಿ ಗೆಳತಿಯ ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. 2014ರಲ್ಲಿ ವಿರಾಟ್ ಕೊಹ್ಲಿಗೆ ಪ್ರೇಮ ನಿವೇದನೆ ಮಾಡಿದ್ದ ಡೇನಿಯಲ್ ವ್ಯಾಟ್, ಇದೀಗ ಗೆಳತಿ ಜಾರ್ಜಿ ಹಾಡ್ಜ್ ಜತೆಗೆ ಎಂಗೇಟ್‌ಮೆಂಟ್ ಮಾಡಿಕೊಳ್ಳುವ ಮೂಲಕ ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿದ್ದಾರೆ.
ಜಾರ್ಜಿ ಹಾಡ್ಜ್, ಸಿಎಎ ಬೇಸ್ ಮಹಿಳಾ ಫುಟ್ಬಾಲ್ ಹೆಡ್ ಆಗಿ ಗುರುತಿಸಿಕೊಂಡಿದ್ದಾರೆ. ಡೇನಿಯಲ್ ವ್ಯಾಟ್, ಕೇಪ್‌ಟೌನ್‌ನಿಂದಲೇ ಈ ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾವು ಆತಿಥ್ಯವನ್ನು ವಹಿಸಿತ್ತು. ಡೇನಿಯಲ್ ವ್ಯಾಟ್, ಇಂಗ್ಲೆಂಡ್ ತಂಡದ ಪ್ರಮುಖ ಸದಸ್ಯೆಯಾಗಿದ್ದರು. ಇಂಗ್ಲೆಂಡ್ ತಂಡವು ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು.
ಇದೀಗ ಡೇನಿಯಲ್ ವ್ಯಾಟ್ ಹಾಗೂ ಜಾರ್ಜಿ ಹಾಡ್ಜ್ ಲಿಪ್‌ಲಾಕ್ ಮಾಡಿಕೊಳ್ಳುವುದರ ಜತೆಗೆ ಉಂಗುರದ ಬೆರಳು ತೋರಿಸಿ, "ಎಂದೆಂದಿಗೂ ನನ್ನದೇ" ಎನ್ನುವ ಸಂದೇಶವನ್ನು ಈ ಸಲಿಂಗಿ ಜೋಡಿ ಸಾರಿದೆ. ಡೇನಿಯಲ್ ವ್ಯಾಟ್, ಕೆಲಕಾಲ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ಇನ್ನು ಇತ್ತೀಚೆಗಷ್ಟೇ ನಡೆದ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರ್ತಿಯರ ಹರಾಜಿನಲ್ಲಿ ಡೇನಿಯಲ್ ವ್ಯಾಟ್ ಅನ್‌ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಆದರೆ ಡೇನಿಯಲ್ ವ್ಯಾಟ್ ಅವರಿಗೆ ಡಬ್ಲ್ಯೂಪಿಎಲ್ ಹಾದಿ ಸಂಪೂರ್ಣ ಮುಚ್ಚಿದೆ ಎಂದರ್ಥವಲ್ಲ, ಯಾವುದಾದರೂ ಆಟಗಾರ್ತಿ ಟೂರ್ನಿಗೆ ಅಲಭ್ಯರಾದರೇ, ಫ್ರಾಂಚೈಸಿಯು ಬಯಸಿದರೇ, ವ್ಯಾಟ್ ಯಾವುದಾದರೂ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ.
WPL 2023: 4 ಟಿ20 ವಿಶ್ವಕಪ್ ಗೆದ್ದ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್..!
ಇನ್ನು ಡೇನಿಯಲ್ ವ್ಯಾಟ್, 2014ರಲ್ಲಿ ತಮ್ಮನ್ನು ಮದುವೆಯಾಗುವಂತೆ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದರು. ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ, ಕೊಹ್ಲಿ ನನ್ನನ್ನು ಮದುವೆಯಾಗಿ ಎಂದು ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಡೇನಿಯಲ್ ವ್ಯಾಟ್, ಇಂಗ್ಲೆಂಡ್ ಪರ 102 ಏಕದಿನ ಪಂದ್ಯಗಳನ್ನಾಡಿ 1,776 ರನ್ ಹಾಗೂ 27 ವಿಕೆಟ್ ಕಬಳಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ 143 ಟಿ20 ಪಂದ್ಯಗಳನ್ನಾಡಿ 2,369 ರನ್ ಹಾಗೂ 46 ವಿಕೆಟ್ ಕಬಳಿಸಿದ್ದಾರೆ.
31 ವರ್ಷದ ಡೇನಿಯಲ್ ವ್ಯಾಟ್, ಸಲಿಂಗಿ ವಿವಾಹವಾಗುತ್ತಿರುವ ಮೊದಲ ಕ್ರಿಕೆಟರೇನು ಅಲ್ಲ. ಈಗಾಗಲೇ ನ್ಯೂಜಿಲೆಂಡ್‌ನ ಲಿಯಾ ತಹಾಹು& ಆಮಿ ಸಟ್ಟರ್‌ವೈಟ್, ದಕ್ಷಿಣ ಆಫ್ರಿಕಾದ ಮ್ಯಾರಿಜಾನೆ ಕ್ಯಾಪ್& ಡೇನ್ ವ್ಯಾನ್ ನೈಕೆರ್ಕ್, ಆಸ್ಟ್ರೇಲಿಯಾದ ಮೆಗನ್ ಶ್ಯುಟ್& ಜೆಸ್ ಹೋಲಿಯಾಕ್, ಜೆಸ್ ಜಾನ್ಸನ್& ಸಾರಾ ವೇರನ್, ಇಂಗ್ಲೆಂಡ್‌ನ ನಥಾಲಿ ಶೀವರ್& ಕ್ಯಾಥರೀನ್ ಬ್ರಂಟ್, ದಕ್ಷಿಣ ಆಫ್ರಿಕಾದ ಲಿಜ್ಜೆಲ್ಲೇ ಲೀ& ತಜ್ಜಾ ಕ್ರೋನ್ಸೆ, ಲೌರೆನ್ ವಿನ್‌ಫೀಲ್ಡ್-ಹಿಲ್& ಕೌರ್ಟ್ನಿ ಹಿಲ್, ಮ್ಯಾಡಿ ಗ್ರೀನ್ & ಲಿಜ್ ಪೆರ್ರಿ ಈಗಾಗಲೇ ಸಲಿಂಗಿ ವಿವಾಹವಾಗಿದ್ದಾರೆ.
ಇನ್ನು ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 04ರಿಂದ ಆರಂಭವಾಗಲಿದ್ದು, ಬೆಥ್ ಮೂನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಚೊಚ್ಚಲ ಆವೃತ್ತಿಯ ಸಂಪೂರ್ಣ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬೈನ ಎರಡು ಸ್ಟೇಡಿಯಂನಲ್ಲಿ ಜರುಗಲಿದೆ.
