ರಾಯಲ್ ಚಾಲೆಂಜರ್ಸ್ ಬೆಂಗಳೂರು 18ನೇ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಕೊಹ್ಲಿ, ಗೇಲ್ ಮತ್ತು ಡಿವಿಲಿಯರ್ಸ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ತಂಡದ ದೀರ್ಘಕಾಲದ ಕನಸು ನನಸಾಗಿದೆ ಎಂದು ಹೇಳಿದರು.

ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 6 ರನ್‌ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ 17 ಐಪಿಎಲ್ ಸೀಸನ್ ಆಡುತ್ತಾ ಬಂದಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆರ್‌ಸಿಬಿ ತಂಡವು 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಆರ್‌ಸಿಬಿಗೆ ಕಳೆದ ಒಂದೂವರೆ ದಶಕದಿಂದಲೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಇನ್ನು ಆರ್‌ಸಿಬಿ ಸೋಲು-ಗೆಲುವಿನಲ್ಲಿ ಬೆಂಬಿಡದೇ ಬೆಂಬಲಿಸುತ್ತಾ ಬಂದಿರುವ ಫ್ಯಾನ್ಸ್, ಈ ಸಲ ಕಪ್ ನಮ್ದೇ ಎಂದು ತಂಡವನ್ನು ಹುರಿದುಂಬಿಸುತ್ತಲೇ ಬಂದಿದ್ದರು. ಆದರೆ ಕಪ್ ಮಾತ್ರ ನಮ್ಮದಾಗಿರಲಿಲ್ಲ. ಇನ್ನು ಕಳೆದ ವರ್ಷ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ ನೇತೃತ್ವದ ಮಹಿಳಾ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದರ ಬೆನ್ನಲ್ಲೇ ಆರ್‌ಸಿಬಿ ಪುರುಷರ ತಂಡವು ಕಪ್ ಗೆಲ್ಲಲಿ ಎಂದು ಫ್ಯಾನ್ಸ್‌ ಹಾರೈಸುತ್ತಲೇ ಬಂದಿದ್ದರು. ಇದರ ಜತೆಗೆ ಈ ಸಲ ಕಪ್ ನಮ್ದೇ ಎನ್ನುವ ಘೋಷಣೆ ಕೂಡಾ ಜೋರಾಗಿತ್ತು.

Scroll to load tweet…

Scroll to load tweet…

ಇನ್ನು 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಸ್ವತಃ ವಿರಾಟ್ ಕೊಹ್ಲಿ, ಆರ್‌ಸಿಬಿ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಈ ಸಲ ಕಪ್ ನಮ್ದೇ ಎಂದು ಹೇಳಬೇಡಿ ಎಂದು ಮನವಿ ಮಾಡಿಕೊಂಡಿದ್ದರಂತೆ. ಇದನ್ನು ಎಬಿ ಡಿವಿಲಿಯರ್ಸ್‌ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಆರ್‌ಸಿಬಿ ಐಪಿಎಲ್ ಟ್ರೋಫಿ ಬರ ನೀಗಿಸಿಕೊಳ್ಳುತ್ತಿದ್ದಂತೆಯೇ ಕನ್ನಡದಲ್ಲಿಯೇ ಈ ಸಲ ಕಪ್ ನಮ್ದೇ ಎಂದು ಗರ್ಜಿಸಿದ್ದಾರೆ. ಕೊಹ್ಲಿಗೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಸಾಥ್ ನೀಡಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ನಾನು ಈ ತಂಡಕ್ಕಾಗಿ ನನ್ನ ಯವ್ವೌನ, ನಮ್ಮ ಪ್ರೈಮ್ ಹಾಗೂ ನನ್ನ ಅನುಭವವನ್ನು ಧಾರೆ ಎರೆದಿದ್ದೇನೆ. ಇದೊಂದು ರೀತಿ ಅವಿಸ್ಮರಣೀಯ ಅನುಭವ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ಉದ್ದೇಶಿಸಿ, ನಾವು ಮೂರು ಜನ ನಮ್ಮ ಪ್ರೈಮ್ ಕ್ರಿಕೆಟ್ ಅನ್ನು ತಂಡಕ್ಕೆ ನೀಡಿದ್ದೇವೆ, ಆದರೆ ಸ್ವಲ್ಪದರಲ್ಲಿ ಎಡವಿದ್ದೆವು. ಈ ಟ್ರೋಫಿ ಎಲ್ಲರಿಗೂ ಸೇರಿದ್ದು. ನಾವು ತಂಡಕ್ಕಾಗಿ ನಮ್ಮ ಹೃದಯ ಹಾಗೂ ಆತ್ಮ ನೀಡಿದ್ದೇವೆ. ಈ ಸಲ ಕಪ್ ನಮ್ದು ಎಂದು ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಇನ್ನು ಫೈನಲ್ ಪಂದ್ಯದ ವಿಚಾರಕ್ಕೆ ಬರುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 43 ರನ್ ಗಳಿಸಿದ್ದೇ ಅರ್‌ಸಿಬಿ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು.

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು ಉತ್ತಮ ಆರಂಭ ಪಡೆಯಿತಾದರೂ ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮಾರಕ ದಾಳಿಗೆ ತತ್ತರಿಸಿ 7 ವಿಕೆಟ್ ಕಳೆದುಕೊಂಡು ಪಂಜಾಬ್ ಕಿಂಗ್ಸ್ 184 ರನ್ ಗಳಿಸಲಷ್ಟೇ ಶಕ್ತವಾಯಿತು.