ಸಿಡ್ನಿ(ನ.30) ಆಸೀಸ್‌ ವಿರುದ್ಧ ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 89 ರನ್‌ಗಳಿಸಿದ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮಹತ್ವದ ಮೈಲಿಗಲ್ಲು ದಾಟಿದರು. 

250ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 22,000 ರನ್‌ಗಳಿಸಿದ ಸಾಧನೆ ಮಾಡಿದರು. ಕೊಹ್ಲಿ ಕೇವಲ 11 ರನ್‌ಗಳಿಂದ ಏಕದಿನದ 44ನೇ ಶತಕವನ್ನು ತಪ್ಪಿಸಿಕೊಂಡರು. ಕೊಹ್ಲಿ 418 ಪಂದ್ಯಗಳಿಂದ 462 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22 ಸಾವಿರ ರನ್ ಪೂರೈಸಲು ಸಚಿನ್ ತೆಂಡುಲ್ಕರ್ 493 ಇನಿಂಗ್ಸ್‌ ತೆಗೆದುಕೊಂಡಿದ್ದರು. ಇನ್ನು ಬ್ರಿಯಾನ್ ಲಾರಾ(511 ಇನಿಂಗ್ಸ್) ಹಾಗೂ ರಿಕಿ ಪಾಂಟಿಂಗ್(514) ಆ ನಂತರದ ಸ್ಥಾನದಲ್ಲಿದ್ದಾರೆ. 

ಆಸೀಸ್ ವಿರುದ್ಧ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..!

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌ (34,357 ರನ್‌) ಮೊದಲಿಗರಾಗಿದ್ದರೆ, ಕುಮಾರ್‌ ಸಂಗಕ್ಕಾರ (28, 016 ರನ್‌) 2ನೇ ಯವರಾಗಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯ 22,011 ರನ್‌ ಗಳಿಸಿದ್ದಾರೆ. ಏಕದಿನದಲ್ಲಿ 11,977 ರನ್‌, ಟೆಸ್ಟ್‌ನಲ್ಲಿ 7,240 ರನ್‌ ಹಾಗೂ ಟಿ20ಯಲ್ಲಿ 2,794 ರನ್‌ ಗಳಿಸಿದ್ದಾರೆ.

ಕೊಹ್ಲಿ, ಕೆ,ಎಲ್. ರಾಹುಲ್ ಸ್ಫೋಟಕ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 51 ರನ್‌ಗಳಿಂದ ಶರಣಾಗಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಫಿಂಚ್ ಪಡೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಇನ್ನು ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಡಿಸೆಂಬರ್ 02ರಂದು ನಡೆಯಲಿದೆ.