Asianet Suvarna News Asianet Suvarna News

Ind vs SL ವಿರಾಟ್ ಕೊಹ್ಲಿ 100ನೇ ಟೆಸ್ಟ್‌ಗಿಲ್ಲ ಪ್ರೇಕ್ಷಕರು; ಅಭಿಮಾನಿಗಳ ಆಕ್ರೋಶ..!

* ಭಾರತ-ಲಂಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ

* ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಪಂದ್ಯ ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯ

* ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಮೊಹಾಲಿ ಟೆಸ್ಟ್ ಪಂದ್ಯ

Virat Kohli 100th Test to be played behind closed doors in Mohali Fans slam BCCI for not allowing spectators kvn
Author
Bengaluru, First Published Mar 1, 2022, 10:44 AM IST | Last Updated Mar 1, 2022, 10:57 AM IST

ನವದೆಹಲಿ(ಮಾ.01): ಮಾರ್ಚ್‌ 4ರಿಂದ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆಯಲಿರುವ ಮೊದಲ ಟೆಸ್ಟ್‌, ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಅವರ ವೃತ್ತಿ ಬದುಕಿನ 100ನೇ ಟೆಸ್ಟ್‌ ಆಗಲಿದೆ. ಅವರ ಈ ಮೈಲಿಗಲ್ಲಿನ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿರುವ ಬಿಸಿಸಿಐ (BCCI ವಿರುದ್ಧ ಕ್ರಿಕೆಟ್‌ ಅಭಿಮಾನಿಗಳು ಸಿಟ್ಟಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ ಕ್ರಿಕೆಟ್‌ ಸಂಸ್ಥೆ(ಪಿಸಿಎ) ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡದೆ ಬಿಸಿಸಿಐ, ಕೊಹ್ಲಿ ವಿರುದ್ಧ ಷಡ್ಯಂತ್ರ ನಡೆಸುತ್ತಿದೆ ಎಂದು ಟ್ವೀಟರ್‌ನಲ್ಲಿ ಸಾವಿರಾರು ಅಭಿಮಾನಿಗಳು ಬರೆದು ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಚಾರ ಟ್ರೆಂಡ್‌ ಆಗುತ್ತಿದೆ.

ಕೆಲ ತಿಂಗಳಗಳು ಹಿಂದಷ್ಟೇ ನಾಯಕತ್ವ ವಿಚಾರದಲ್ಲಿ ಕೊಹ್ಲಿ ಹಾಗೂ ಬಿಸಿಸಿಐ ನಡುವೆ ತಿಕ್ಕಾಟ ನಡೆದಿತ್ತು. ಇದೇ ಕಾರಣಕ್ಕೆ ಕೊಹ್ಲಿ ವಿರುದ್ಧ ಬಿಸಿಸಿಐ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಅಭಿಮಾನಿಗಳು ಟ್ವೀಟಿಸಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು.

ಇತ್ತೀಚೆಗಷ್ಟೇ ವೆಸ್ಟ್‌ಇಂಡೀಸ್‌ ವಿರುದ್ಧದ ಟಿ20 ಸರಣಿಗೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿತ್ತು. ಶ್ರೀಲಂಕಾ ವಿರುದ್ಧ ಧರ್ಮಶಾಲಾದಲ್ಲಿ ನಡೆದ 2 ಟಿ20 ಪಂದ್ಯಗಳಿಗೆ ಪ್ರೇಕ್ಷಕರಿದ್ದರು. ಬೆಂಗಳೂರಲ್ಲಿ ಮಾರ್ಚ್ 12ರಿಂದ ಲಂಕಾ ವಿರುದ್ಧ ನಡೆಯಲಿರುವ 2ನೇ ಟೆಸ್ಟ್‌ಗೆ ಶೇಕಡ 50ರಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡಲು ಬಿಸಿಸಿಐ ಅನುಮತಿ ನೀಡಿದೆ. ಆದರೆ ಮೊಹಾಲಿಯಲ್ಲಿ ಮಾತ್ರ ಉದ್ದೇಶಪೂರ್ವಕವಾಗಿಯೇ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಅಭಿಮಾನಿಗಳು ಟೀಕೆ ಮಾಡಿದ್ದಾರೆ.

ಪ್ರೇಕ್ಷಕರಿಗೆ ಬಿಸಿಸಿಐ ಪ್ರವೇಶ ನೀಡಿಲ್ಲ ಏಕೆ?

ಮೊಹಾಲಿಯಲ್ಲಿ ಇನ್ನೂ ಕೋವಿಡ್‌ ಪ್ರಕರಣಗಳು ದಾಖಲಾಗುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇತ್ತೀಚೆಗಷ್ಟೇ ಪಂಜಾಬ್‌ನಲ್ಲಿ ಚುನಾವಣೆ ನಡೆದಿದ್ದು ಇನ್ನೂ ಫಲಿತಾಂಶ ಹೊರಬಂದಿಲ್ಲ. ಹೀಗಾಗಿ ಒಂದೆಡೆ ಸಾವಿರಾರು ಜನರು ಸೇರುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

Ind vs SL: ಲಂಕಾ ಎದುರು ಸರಣಿ ಕ್ಲೀನ್‌ಸ್ವೀಪ್ ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ..!

ಮೊಹಾಲಿಯಲ್ಲಿ ಅಭ್ಯಾಸ ಆರಂಭಿಸಿದ ವಿರಾಟ್‌

ಮೊಹಾಲಿ: ತಮ್ಮ 100ನೇ ಟೆಸ್ಟ್‌ ಪಂದ್ಯವನ್ನು ಆಡುವ ಹುಮ್ಮಸ್ಸಿನಲ್ಲಿರುವ ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಶ್ರೀಲಂಕಾ ವಿರುದ್ಧ ಮಾರ್ಚ್‌ 4ರಿಂದ ನಡೆಯಲಿರುವ ಮೊದಲ ಟೆಸ್ಟ್‌ ಆಡಲು ಮೊಹಾಲಿ ತಲುಪಿದ್ದು ಅಭ್ಯಾಸ ಆರಂಭಿಸಿದ್ದಾರೆ. ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಅವರು ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶುಭ್‌ಮನ್‌ ಗಿಲ್‌, ರಿಷಭ್‌ ಪಂತ್‌ (Rishabh Pant), ಮೊಹಮದ್‌ ಶಮಿ, ಜಯಂತ್‌ ಯಾದವ್‌, ರವಿಚಂದ್ರನ್ ಅಶ್ವಿನ್‌ (Ravichandran Ashwin) ಸಹ ಮೊಹಾಲಿಗೆ ತಲುಪಿದ್ದು, ಅಭ್ಯಾಸದಲ್ಲಿ ತೊಡಗಿದ್ದಾರೆ. ಸೋಮವಾರ ಮೊಹಾಲಿಗೆ ಆಗಮಿಸಿದ ಭಾರತ, ಶ್ರೀಲಂಕಾ ತಂಡಗಳು ಮಂಗಳವಾರದಿಂದ ಅಭ್ಯಾಸ ಆರಂಭಿಸಲಿವೆ.

100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸ್ತಾರಾ ಕಿಂಗ್ ಕೊಹ್ಲಿ..?

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಲು ಪದೇ ಪದೇ ವಿಫಲರಾಗುತ್ತಿದ್ದಾರೆ. 2019ರಲ್ಲಿ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್‌ನಲ್ಲಿ (Pink Ball Test) ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಲು ವಿಫಲರಾಗುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯದಲ್ಲಾದರೂ ಶತಕ ಬಾರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios