Ind vs SL: ಲಂಕಾ ಎದುರು ಸರಣಿ ಕ್ಲೀನ್‌ಸ್ವೀಪ್ ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ..!
ಬೆಂಗಳೂರು: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India) ನಿರೀಕ್ಷೆಯಂತೆಯೇ ಶ್ರೀಲಂಕಾ ಎದುರಿನ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದರ ಜತೆಗೆ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದೆ. ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ (Rohit Sharma) ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಅತಿಹೆಚ್ಚು ಟಿ20 ಪಂದ್ಯದಲ್ಲಿ ಕಣಕ್ಕೆ: ರೋಹಿತ್ ವಿಶ್ವದಾಖಲೆ!
ರೋಹಿತ್ ಶರ್ಮಾ ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ಆಟಗಾರ ಎನಿಸಿಕೊಂಡಿದ್ದಾರೆ. ಲಂಕಾ ವಿರುದ್ಧದ 3ನೇ ಪಂದ್ಯ ಅವರಾಡಿದ 125ನೇ ಪಂದ್ಯವಾಗಿತ್ತು. ಈ ಮೂಲಕ 124 ಪಂದ್ಯಗಳನ್ನಾಡಿರುವ ಪಾಕಿಸ್ತಾನದ ಶೋಯೆಬ್ ಮಲಿಕ್‌ರ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.
ಪಾಕಿಸ್ತಾನದ ಮೊಹಮದ್ ಹಫೀಜ್(119), ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಇಯಾನ್ ಮೊರ್ಗನ್(115) ನಂತರದ ಸ್ಥಾನಗಳಲ್ಲಿದ್ದಾರೆ. ಅತಿ ಹೆಚ್ಚು ಏಕದಿನ (463) ಹಾಗೂ ಟೆಸ್ಟ್ (200) ಆಡಿದ ಆಟಗಾರ ಎಂಬ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಲ್ಲಿದೆ.
ಹ್ಯಾಟ್ರಿಕ್ ಸರಣಿ ವೈಟ್‌ವಾಷ್: ಭಾರತ ಹೊಸ ದಾಖಲೆ!
ಶ್ರೀಲಂಕಾ ವಿರುದ್ಧದ ಸರಣಿಯನ್ನು 3-0ಯಲ್ಲಿ ಗೆಲ್ಲುವ ಮೂಲಕ ಭಾರತ, ಟೆಸ್ಟ್ ಆಡುವ ದೇಶಗಳ ವಿರುದ್ಧ ಸತತ 3 ಸರಣಿ ವೈಟ್‌ವಾಷ್ ಮಾಡಿದ ಮೊದಲ ತಂಡ ಎನಿಸಿಕೊಂಡಿದೆ. ಭಾರತ ಕಳೆದ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇತ್ತೀಚೆಗೆ ವೆಸ್ಟ್‌ಇಂಡೀಸ್ ವಿರುದ್ಧ ತಲಾ 3-0 ಅಂತರದಲ್ಲಿ ಸರಣಿ ಗೆದ್ದಿತ್ತು.
ಸತತ 12 ಟಿ20 ಗೆಲುವು: ವಿಶ್ವದಾಖಲೆ ಸರಿಗಟ್ಟಿದ ಭಾರತ
ಅಂತಾರಾಷ್ಟ್ರೀಯ ಟಿ20ಯಲ್ಲಿ ಟೀಂ ಇಂಡಿಯಾ ಸತತ 12 ಗೆಲುವುಗಳನ್ನು ಕಂಡಿದೆ. ಅಷ್ಘಾನಿಸ್ತಾನ ಹಾಗೂ ರೊಮೇನಿಯಾ ತಂಡಗಳು ಸಹ ಸತತ 12 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದವು. ಇನ್ನೊಂದು ಪಂದ್ಯ ಗೆದ್ದರೆ ಭಾರತ ವಿಶ್ವ ದಾಖಲೆಗೆ ಪಾತ್ರವಾಗಲಿದೆ.
ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ 3 ಪಂದ್ಯ ಗೆದ್ದಿದ್ದ ಭಾರತ ಆ ಬಳಿಕ, ನ್ಯೂಜಿಲೆಂಡ್, ವಿಂಡೀಸ್ ವಿರುದ್ಧ ತಲಾ 3 ಪಂದ್ಯಗಳನ್ನು ಗೆದ್ದಿತ್ತು. ಲಂಕಾ ವಿರುದ್ಧವೂ ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದೆ.
3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್ ಗರಿಷ್ಠ ರನ್ ಬಾರಿಸಿದ ಭಾರತೀಯ
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಲಂಕಾ ಎದುರಿನ 3 ಪಂದ್ಯಗಳ ಟಿ20 ಸರಣಿಯ ಮೂರು ಪಂದ್ಯಗಳಲ್ಲೂ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ ಒಟ್ಟಾರೆ 204 ರನ್ ಬಾರಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು 2016ರಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರಿನ 3 ಪಂದ್ಯಗಳ ಸರಣಿಯಲ್ಲಿ 199 ರನ್ ಬಾರಿಸಿದ್ದರು.