ವಿಜಯ್‌ ಹಜಾರೆ ಟ್ರೋಫಿ ಗೆಲ್ಲುವ ಕರ್ನಾಟಕದ ಆಸೆ ಭಗ್ನವಾಗಿದೆ. ಸೌರಾಷ್ಟ್ರ ತಂಡದ ನಾಯಕ ಹಾಗೂ ಅನುಭವಿ ವೇಗಿ ಜೈದೇವ್‌ ಉನಾದ್ಕತ್‌ ದಾಳಿಯ ಮುಂದೆ ಮಂಕಾದ ಕರ್ನಾಟಕ ತಂಡ ಸೆಮಿಫೈನಲ್‌ ಪಂದ್ಯದಲ್ಲಿ 5 ವಿಕೆಟ್‌ ಸೋಲು ಕಂಡಿದೆ. 

ಅಹಮದಾಬಾದ್‌ (ನ.30): ಸೌರಾಷ್ಟ್ರ ತಂಡದ ನಾಯಕ ಹಾಗೂ ಅನುಭವಿ ಬೌಲರ್‌ ಜೈದೇವ್‌ ಉನಾದ್ಕತ್‌ ಮಾರಕ ದಾಳಿಯ ಮುಂದೆ ಕರ್ನಾಟಕ ಮಂಡಿಯೂರಿದೆ. ಉನಾದ್ಕತ್‌ ಅವರ 26 ರನ್‌ಗೆ 4 ವಿಕೆಟ್‌ ಆರ್ಭಟದಿಂದಾಗಿ ವಿಜಯ್‌ ಹಜಾರೆ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 5 ವಿಕೆಟ್‌ ಸೋಲು ಕಂಡಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಸೆಮಿಫೈನಲ್‌ ಕಾದಾಟದಲ್ಲಿ ಜೈದೇವ್‌ ಉನಾದ್ಕತ್‌, ಮೊದಲ 10 ಓವರ್‌ನ ಒಳಗೆ ಮಯಾಂಕ್‌ ಅಗರ್ವಾಲ್ ಹಾಗೂ ಬಿಆರ್‌ ಶರತ್‌ ವಿಕೆಟ್‌ಗಳನ್ನು ಉರುಳಿಸಿದ್ದರು. ಆ ಬಳಿಕ ಶ್ರೇಯಸ್‌ ಗೋಪಾಲ್‌ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಆದರೆ, ರವಿಕುಮಾರ್ ಸಮರ್ಥ್‌ (88 ರನ್‌, 135 ಎಸೆತ, 4 ಬೌಂಡರಿ, 1 ಸಿಕ್ಸರ್‌) ಎಚ್ಚರಿಕೆ ಬ್ಯಾಟಿಂಗ್‌ ಮಾಡಿ ಅರ್ಧಶತಕ ಬಾರಿಸಿದರೂ, ರಾಜ್ಯ ತಂಡ ಕೇವಲ 171 ರನ್‌ಗೆ ಆಲೌಟ್‌ ಆಯಿತು. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ, ಏಕಾಂಗಿಯಾಗಿ ರವಿಕುಮಾರ್‌ ಸಮರ್ಥ್‌ ಹೊರಾಟ ನಡೆಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸುವಲ್ಲಿ ನೆರವಾದರು. ಸಮರ್ಥ್‌ ಬಿಟ್ಟರೆ, ಕೆಳ ಕ್ರಮಾಂಕದ ಮನೋಜ್‌ ಭಾಂಡಗೆ (22) ಕರ್ನಾಟಕ ತಂಡದ ಗರಿಷ್ಠ ಸ್ಕೋರರ್‌ ಆಗಿದ್ದರು. ಕರ್ನಾಟಕ ತಂಡದಲ್ಲಿ ಕೇವಲ ನಾಲ್ಕು ಮಂದಿ ಬ್ಯಾಟ್ಸ್‌ಮನ್‌ಗಳು ಮಾತ್ರವೇ 10ಕ್ಕೂ ಅಧಿಕ ರನ್‌ ಬಾರಿಸಲು ಯಶಸ್ವಿಯಾದರು.

172 ರನ್‌ಗಳ ಚೇಸಿಂಗ್‌ ಆರಂಭಿಸಿದ ಸೌರಾಷ್ಟ್ರ ತಂಡ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಹಾರ್ವಿಕ್‌ ದೇಸಾಯಿ ಹಾಗೂ ಶೆಲ್ಡನ್‌ ಜಾಕ್ಸನ್‌ ಶೂನ್ಯಕ್ಕೆ ಔಟಾಗಿದ್ದರಿಂದ ಸೌರಾಷ್ಟ್ರ 0 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಆದರೆ, ಜಯ್‌ ಗೋಹಿಲ್‌ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದರು. ಇವರಿಗೆ ಸಮರ್ಥ್‌ ವ್ಯಾಸ್‌ ಹಾಗೂ ಪ್ರೇರಕ್‌ ಮಂಕಡ್‌ ಕೆಲ ರನ್‌ಗಳನ್ನು ಬಾರಿಸಿ ತಂಡದ ಗೆಲುವಿಗೆ ಸಹಾಯ ಮಾಡಿದರು.

ಸಮರ್ಥ್‌ ವ್ಯಾಸ್‌ ಅವರೊಂದಿಗೆ ಗೋಹಿಲ್‌ ಮೊದಲಿಗೆ 75 ರನ್‌ಗಳ ಜೊತೆಯಾಟ ಆಡಿದರು. ಈ ವೇಳೆ ದಾಳಿಗೆ ಇಳಿದ ಕೆ. ಗೌತಮ್‌ 33 ರನ್‌ಗೆ ವ್ಯಾಸ್‌ ಅವರ ವಿಕೆಟ್‌ ಉರುಳಿಸಿದರು. ಆ ಬಳಿಕ, ಪ್ರೇರಕ್‌ ಮಂಕಡ್‌, ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸುವ ಮುನ್ನ ವೇಗವಾಗಿ 35 ರನ್‌ ಬಾರಿಸಿದ್ದರು. ಕೊನೆಯಲ್ಲಿ ಗೋಹಿಲ್‌ ಕೂಡ 61 ರನ್‌ ಬಾರಿಸಿ ಕೆ.ಗೌತಮ್‌ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು. ಆದರೆ, ಅದಾಗಲೇ ಸೌರಾಷ್ಟ್ರ ತಂಡ ಗೆಲುವು ಸಾಧಿಸುವ ಸನಿಹದಲ್ಲಿತ್ತು.

ಕೊನೆಯಲ್ಲಿ ಅರ್ಪಿತ್‌ ವಸವಾಡ ಹಾಗೂ ಚಿರಾಗ್‌ ಜಾನಿ ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದಂತೆ ತಂಡವನ್ನು ಗೆಲುವಿನ ದಡ ಸೇರಿದರು. ಇನ್ನೂ 82 ಎಸೆತಗಳು ಬಾಕಿ ಇರುವಂತೆ 5 ವಿಕೆಟ್ ಗೆಲುವಿನ ಮೂಲಕ ಸೌರಾಷ್ಟ್ರ ತಂಡ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ಗೆ ಏರಿತು. 

ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೋಹಿಲ್‌ಗೆ ನೀಡಿದ ಜೈದೇವ್‌: ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೈದೇವ್‌ ಉನಾದ್ಕತ್‌ ಅವರನ್ನು ಪಂದ್ಯಶ್ರೇಷ್ಠ ಎಂದು ಘೋಷಿಸಲಾಗಿತ್ತು. ಆದರೆ, ಜಯ್‌ ಗೋಹಿಲ್‌ ಅವರನ್ನು ಆಹ್ವಾನಿಸಿದ ಉನಾದ್ಕತ್‌ ಪ್ರಸಸ್ತಿಯನ್ನು ಅವರಿಗೆ ನೀಡಿದರು. ತಂಡ 0 ರನ್‌ಗೆ 2 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಗೋಹಿಲ್‌ ಆಡಿರುವ ಆಟಕ್ಕೆ ಅವರನ್ನು ಶ್ಲಾಘನೆ ಮಾಡಿದರು.

Vijay Hazare Trophy: ತಿಣುಕಾಡಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

ಅಸ್ಸಾಂ ತಂಡವನ್ನು ಬಗ್ಗು ಬಡಿದ ಮಹಾರಾಷ್ಟ್ರ: ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ನಾಯಕ ರುತುರಾಜ್‌ ಗಾಯಕ್ವಾಡ್‌ ಅವರ ಭರ್ಜರಿ ಫಾರ್ಮ್‌ ಮುಂದುವರಿದಿದ್ದು, ಅಸ್ಸಾಂ ತಂಡವನ್ನು 12 ರನ್‌ಗಳಿಂದ ಮಣಿಸಿ ಫೈನಲ್‌ ಸಾಧನೆ ಮಾಡಿದೆ. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ರುತುರಾಜ್‌ ಗಾಯಕ್ವಾಡ್‌ (168ರನ್,‌ 126 ಎಸೆತ, 18 ಬೌಂಡರಿ, 6 ಸಿಕ್ಸರ್‌) ಹಾಗೂ ಅಂಕಿತ್‌ ಭಾವ್ನೆ (110 ರನ್‌, 89 ಎಸೆತ, 10 ಬೌಂಡರಿ, 2 ಸಿಕ್ಸರ್‌) ನೆರವಿನಿಂದ 7 ವಿಕೆಟ್‌ಗೆ 350 ರನ್‌ ಪೇರಿಸಿತು. ಪ್ರತಿಯಾಗಿ ಅಸ್ಸಾಂ ತಂಡ ಹೋರಾಟದ ಆಟವಾಡಿದರೂ 8 ವಿಕೆಟ್‌ಗೆ 338 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ರುತುರಾಜ್‌ ಗಾಯಕ್ವಾಡ್‌ ಮಹಾದಾಖಲೆ, ಒಂದೇ ಓವರ್‌ನಲ್ಲಿ 43 ರನ್‌, 7 ಸಿಕ್ಸರ್‌ !

ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ತಂಡಗಳು ಶುಕ್ರವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಎದುರಾಗಲಿವೆ.