ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮುಂದುವರೆದ ಕರ್ನಾಟಕದ ಗೆಲುವಿನ ನಾಗಾಲೋಟವಿದರ್ಭ ಎದುರು 66 ರನ್‌ಗಳ ಜಯ ಸಾಧಿಸಿದ ಮಯಾಂಕ್ ಅಗರ್‌ವಾಲ್ ಪಡೆತಾವಾಡಿದ ಎರಡನೇ ಪಂದ್ಯದಲ್ಲೇ 95 ರನ್ ಚಚ್ಚಿದ ನಿಕಿನ್ ಜೋಶ್

ಕೋಲ್ಕತಾ(ನ.14): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ನಡೆದ ವಿದರ್ಭ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡ 66 ರನ್‌ ಜಯ ಸಾಧಿಸಿತು. ಮೇಘಾಲಯ ಎದುರು ದೊಡ್ಡ ಅಂತರದ ಗೆಲುವು ದಾಖಲಿಸಿದ್ದ ಮಯಾಕಂಕ್‌ ಅಗರ್‌ವಾಲ್ ಪಡೆ, ಇದೀಗ ಮತ್ತೊಂದು ಗೆಲುವು ತನ್ನದಾಗಿಸಿಕೊಂಡಿದೆ. 

ತಾವಾಡಿದ 2ನೇ ಪಂದ್ಯದಲ್ಲೇ ಆಕರ್ಷಕ 96 ರನ್‌ ಗಳಿಸಿದ ನಿಕಿನ್‌ ಜೋಸ್‌ ಹಾಗೂ ಸತತ 2ನೇ ಅರ್ಧಶತಕ ಬಾರಿಸಿದ ಶ್ರೇಯಸ್‌ ಗೋಪಾಲ್‌ ಕರ್ನಾಟಕ 50 ಓವರಲ್ಲಿ 7 ವಿಕೆಟ್‌ಗೆ 314 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ವಿ.ಕೌಶಿಕ್‌ ಹಾಗೂ ವಿದ್ವತ್‌ ಕಾವೇರಪ್ಪ ಅವರ ಮಾರಕ ದಾಳಿಗೆ ಸಿಲುಕಿದ ವಿದರ್ಭ 51 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಅಕ್ಷಯ್‌ ಕರ್ನೇವಾರ್‌ ಹಾಗೂ ದರ್ಶನ್‌ ನಲ್ಕಂಡೆ 8ನೇ ವಿಕೆಟ್‌ಗೆ 140 ರನ್‌ ಜೊತೆಯಾಟವಾಡಿದರು. 57 ರನ್‌ ಗಳಿಸಿ ದರ್ಶನ್‌ ಔಟಾದ ಬಳಿಕ, 9ನೇ ವಿಕೆಟ್‌ಗೆ ಉಮೇಶ್‌ ಯಾದವ್‌(18) ಜೊತೆ ಸೇರಿ ಅಕ್ಷಯ್‌ 47 ರನ್‌ ಸೇರಿಸಿದರು. ಅಕ್ಷಯ್‌(ಔಟಾಗದೆ 104 ರನ್‌) ಶತಕದ ಹೋರಾಟ ವ್ಯರ್ಥವಾಯಿತು. ವಿದರ್ಭ 50 ಓವರಲ್ಲಿ 9 ವಿಕೆಟ್‌ಗೆ 248 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಕರ್ನಾಟಕ ತಂಡದ ಪರ ವಾಸುಕಿ ಕೌಶಿಕ್ 27 ರನ್ ನೀಡಿ 4 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ 3 ವಿಕೆಟ್ ತಮ್ಮದಾಗಿಸಿಕೊಂಡರು. ಇನ್ನು ಮತ್ತೋರ್ವ ವೇಗಿ ರೋನಿತ್ ಮೋರೆ ಒಂದು ವಿಕೆಟ್ ಪಡೆದರೆ, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಒಂದು ಬಲಿ ಪಡೆದರು.

Vijay Hazare Trophy: ಶ್ರೇಯಸ್ ಗೋಪಾಲ್ ಆಲ್ರೌಂಡ್ ಆಟ, ಮೇಘಾಲಯ ಎದುರು ಕರ್ನಾಟಕ ಶುಭಾರಂಭ

ಮಯಾಂಕ್ ಅಗರ್‌ವಾಲ್ ಮತ್ತೆ ಫೇಲ್: ಕರ್ನಾಟಕ ತಂಡದ ನಾಯಕರಾಗಿ ತಂಡವನ್ನು ಮುಂದುವರೆಸುತ್ತಿರುವ ಆರಂಭಿಕ ಬ್ಯಾಟರ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮೊದಲ ಪಂದ್ಯದಲ್ಲಿ ಮೇಘಾಲಯ ಎದುರು ಕೇವಲ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದ ಮಯಾಂಕ್ ಅಗರ್‌ವಾಲ್, ಇದೀಗ ವಿದರ್ಭ ಎದುರಿನ ಎರಡನೇ ಪಂದ್ಯದಲ್ಲಿ ಕೇವಲ 9 ರನ್‌ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಇನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಮಯಾಂಕ್‌ ಅಗರ್‌ವಾಲ್ ಪ್ರದರ್ಶನ ಅಷ್ಟೇನೂ ಉತ್ತಮವಾಗಿಲ್ಲ.

ಸ್ಕೋರ್‌: 
ಕರ್ನಾಟಕ 314/7(ನಿಕಿನ್‌ 96, ಶ್ರೇಯಸ್‌ 56, ದರ್ಶನ್‌ 3-74, ಅಕ್ಷಯ್‌ 2-57)
ವಿದರ್ಭ 248/9(ಅಕ್ಷಯ್‌ 104*, ದರ್ಶನ್‌ 57, ಕೌಶಿಕ್‌ 4-27, ವಿದ್ವತ್‌ 3-40)