ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಶುಭಾರಂಭಮೇಘಾಲಯ ಎದುರು 115 ರನ್‌ಗಳ ಜಯ ಸಾಧಿಸಿದ ಮಯಾಂಕ್ ಅಗರ್‌ವಾಲ್ ಪಡೆಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ ಶ್ರೇಯಸ್ ಗೋಪಾಲ್

ಕೋಲ್ಕತಾ(ನ.12): ರಾಜ್ಯದ ತಾರಾ ಆಲ್ರೌಂಡರ್‌ ಶ್ರೇಯಸ್ ಗೋಪಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಮೇಘಾಲಯ ಎದುರು 115 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬ್ಯಾಟಿಂಗ್‌ನಲ್ಲಿ ಸಮಯೋಚಿತ ಅರ್ಧಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಗೋಪಾಲ್, ಬೌಲಿಂಗ್‌ನಲ್ಲಿ 3 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ನಾಯಕ ಮಯಾಂಕ್‌ ಅಗರ್‌ವಾಲ್‌ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಾಜ್ಯ ತಂಡಕ್ಕೆ ಪಾದಾರ್ಪಣೆ ಪಂದ್ಯವನ್ನಾಡಿದ ನಿಕಿನ್ ಜೋಶ್ 13 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಇನ್ನು ಮೂರನೇ ವಿಕೆಟ್‌ಗೆ ರವಿಕುಮಾರ್ ಸಮರ್ಥ್ ಹಾಗೂ ಮನೀಶ್ ಪಾಂಡೆ ಜೋಡಿ 58 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸಮರ್ಥ್ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮನೀಶ್ ಪಾಂಡೆ 36 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ಶ್ರೇಯಸ್ ಗೋಪಾಲ್ ಆಕರ್ಷಕ ಅರ್ಧಶತಕ: ಒಂದು ಹಂತದಲ್ಲಿ ಕೇವಲ 120 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗಿಳಿದ ಶ್ರೇಯಸ್ ಗೋಪಾಲ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಶ್ರೇಯಸ್ ಅಯ್ಯರ್ 76 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 64 ರನ್ ಬಾರಿಸಿ ಕೊನೆಯವರಾಗಿ ವಿಕೆಟ್‌ ಒಪ್ಪಿಸಿದರು.ಇನ್ನು ಕೊನೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಶರತ್ ಬಿಆರ್(32) ಹಾಗೂ ಕೃಷ್ಣಪ್ಪ ಗೌತಮ್(20) ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಅಂತಿಮವಾಗಿ ಕರ್ನಾಟಕ ತಂಡವು ನಿಗದಿತ 50 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು.

Scroll to load tweet…

ಇನ್ನು ಸವಾಲಿನ ಮೊತ್ತ ಬೆನ್ನತ್ತಿದ ಮೇಘಾಲಯ ತಂಡವು ಮೊದಲ ವಿಕೆಟ್‌ಗೆ 58 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನೇ ಪಡೆಯಿತು. ಆದರೆ 19ನೇ ಓವರ್‌ನಲ್ಲಿ ರೋನಿತ್ ಮೋರೆ ರಾಜ್ಯಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಮೇಘಾಲಯ ತಂಡವು ನಿರಂತರ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಶ್ರೇಯಸ್ ಗೋಪಾಲ್, ಬೌಲಿಂಗ್‌ನಲ್ಲಿ 21 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಮೇಘಾಲಯ ತಂಡವು ಅಲ್ಪಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದರು. ಮೇಘಾಲಯ ತಂಡವು 46 ಓವರ್‌ಗಳಲ್ಲಿ ಕೇವಲ 144 ರನ್ ಬಾರಿಸಿ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು.

ಕರ್ನಾಟಕ ತಂಡದ ಪರ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರೆ, ರೋನಿತ್ ಮೋರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಉರುಳಿಸಿದರು. ಇನ್ನು ವಿದ್ವತ್ ಕಾವೇರಪ್ಪ ಹಾಗೂ ವಿ ಕೌಶಿಕ್ ತಲಾ ಒಂದೊಂದು ವಿಕೆಟ್ ತಪ್ಪದಾಗಿಸಿಕೊಂಡರು.