ವಿಜಯ್ ಹಜಾರೆ ಟೂರ್ನಿಯಲ್ಲಿಂದು ಹಾಲಿ ಚಾಂಪಿಯನ್‌ ಕರ್ನಾಟಕ ತಂಡವು ಕೇರಳದ ಸವಾಲನ್ನು ಸ್ವೀಕರಿಸಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ದೆಹಲಿ(ಮಾ.08): ಹಾಲಿ ಚಾಂಪಿಯನ್‌ ಕರ್ನಾಟಕ ವಿಜಯ್‌ ಹಜಾರೆ ಏಕದಿನ ಪಂದ್ಯಾವಳಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಮವಾರ ಕೇರಳ ವಿರುದ್ಧ ಸೆಣಸಲಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಸೋತಿದ್ದ ರಾಜ್ಯ ತಂಡ, ಆ ನಂತರ 4 ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಗುಂಪು ಹಂತದಲ್ಲಿ ಕೇರಳ ವಿರುದ್ಧವೂ ಕರ್ನಾಟಕ ಭರ್ಜರಿ ಗೆಲುವು ಪಡೆದಿತ್ತು.

ದೇವದತ್‌ ಪಡಿಕ್ಕಲ್‌ (572 ರನ್‌), ನಾಯಕ ಆರ್‌.ಸಮರ್ಥ್ (413) ಹಾಗೂ ಕೆ.ವಿ.ಸಿದ್ಧಾಥ್‌ (241) ಅಬ್ಬರಿಸಿದ್ದು, ಮಧ್ಯಮ ಕ್ರಮಾಂಕಕ್ಕೆ ಹೆಚ್ಚು ಅವಕಾಶವೇ ಸಿಕ್ಕಿಲ್ಲ. ಗುಂಪು ಹಂತದ 5 ಪಂದ್ಯಗಳಲ್ಲಿ ರಾಜ್ಯ ಗಳಿಸಿದ ಒಟ್ಟು 1453 ರನ್‌ ಪೈಕಿ ಈ ಮೂವರೇ 1226 ರನ್‌ ಕಲೆಹಾಕಿದ್ದಾರೆ. ಕರ್ನಾಟಕ ತಂಡಕ್ಕೆ ಮನೀಶ್‌ ಪಾಂಡೆ ಹಾಗೂ ಕೆ.ಗೌತಮ್‌ ಸೇರ್ಪಡೆಗೊಂಡಿದ್ದು ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಲಿದ್ದಾರೆ.

ವಿಜಯ್‌ ಹಜಾರೆ ಟೂರ್ನಿ: ಕ್ವಾರ್ಟರ್‌ನಲ್ಲಿ ಕರ್ನಾಟಕ-ಕೇರಳ ಕಾದಾಟ

ಹಿಂದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಅಭಿಮನ್ಯು ಮಿಥುನ್‌ ಆಡಿಸುವ ಬಗ್ಗೆ ಟಾಸ್‌ಗೂ ಮುನ್ನ ನಿರ್ಧರಿಸುವುದಾಗಿ ತಂಡದ ಆಡಳಿತ ತಿಳಿಸಿದೆ. ಕೇರಳ ತನ್ನ ತಾರಾ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಅನುಪಸ್ಥಿತಿಯಲ್ಲಿ ಆಡಲಿದೆ. ರಾಬಿನ್‌ ಉತ್ತಪ್ಪ ಮೇಲೆ ಹೆಚ್ಚು ನಿರೀಕ್ಷೆ ಇದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ