ನವದೆಹಲಿ(ಮಾ.04): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕಕ್ಕೆ ಕೇರಳ ತಂಡ ಎದುರಾಗಲಿದೆ. 

ಬಿಸಿಸಿಐ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾ.8ರಂದು ನಡೆಯುವ 2ನೇ ಕ್ವಾರ್ಟರ್‌ನಲ್ಲಿ ಎದುರಾಗಲಿರುವ ತಂಡಗಳು ಇಲ್ಲಿನ ಪಾಲಂ ಮೈದಾನದಲ್ಲಿ ಪಂದ್ಯವನ್ನು ಆಡಲಿವೆ. ಕರ್ನಾಟಕ ಹಾಗೂ ಕೇರಳ ತಂಡಗಳು ಲೀಗ್‌ ಹಂತದಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದವು. ಗುಂಪು ಹಂತದ ಪಂದ್ಯದಲ್ಲಿ ಕೇರಳ ವಿರುದ್ದ ರವಿಕುಮಾರ್ ಸಮರ್ಥ್ ನೇತೃತ್ವದ ಕರ್ನಾಟಕ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು.

ವಿಜಯ್‌ ಹಜಾರೆ ಏಕದಿನ: ಕ್ವಾರ್ಟರ್‌ಗೆ ತಂಡಗಳು ಅಂತಿಮ!

ಮೊದಲ ಕ್ವಾರ್ಟರ್‌ನಲ್ಲಿ ಗುಜರಾತ್‌ ಹಾಗೂ ಆಂಧ್ರ (ಮಾ.8), 3ನೇ ಕ್ವಾರ್ಟರ್‌ನಲ್ಲಿ ಮುಂಬೈ ಹಾಗೂ ಸೌರಾಷ್ಟ್ರ (ಮಾ.9) ಸೆಣಸಲಿವೆ. ಮಾ.9ಕ್ಕೆ ನಡೆಯುವ 4ನೇ ಕ್ವಾರ್ಟರ್‌ನಲ್ಲಿ ಉತ್ತರ ಪ್ರದೇಶಕ್ಕೆ ಪ್ರೀ ಕ್ವಾರ್ಟರ್‌ನಲ್ಲಿ ಗೆಲ್ಲುವ ತಂಡ ಎದುರಾಗಲಿದೆ. ಮಾ.7ಕ್ಕೆ ಪ್ರಿ ಕ್ವಾರ್ಟರ್‌ನಲ್ಲಿ ದೆಹಲಿ ಹಾಗೂ ಉತ್ತರಾಖಂಡ ಸೆಣಸಲಿವೆ.

ಕರ್ನಾಟಕ ತಂಡಕ್ಕೆ ಮನೀಶ್‌, ಗೌತಮ್‌ ಸೇರ್ಪಡೆ

ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಟೂರ್ನಿಯ ನಾಕೌಟ್‌ ಹಂತಕ್ಕೆ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ತಾರಾ ಬ್ಯಾಟ್ಸ್‌ಮನ್‌ ಮನೀಶ್‌ ಪಾಂಡೆ ಹಾಗೂ ಆಲ್ರೌಂಡರ್‌ ಕೆ.ಗೌತಮ್‌ ಸೇರ್ಪಡೆಗೊಂಡಿದ್ದಾರೆ. ಭಾರತ ತಂಡದೊಂದಿಗೆ ನೆಟ್‌ ಬೌಲರ್‌ ಆಗಿ ಕಾರ‍್ಯನಿರ್ವಹಿಸುತ್ತಿದ್ದ ಗೌತಮ್‌ಗೆ ನಾಕೌಟ್‌ ಪಂದ್ಯಗಳಲ್ಲಿ ಆಡಲು ಬಿಸಿಸಿಐ ಅನುಮತಿ ನೀಡಿದೆ. 

ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸಾಗಿರುವ ಪಾಂಡೆ, ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದು, ವಿಜಯ್‌ ಹಜಾರೆ ನಾಕೌಟ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ಗುಂಪು ಹಂತದ ವೇಳೆ ತಂಡದಲ್ಲಿದ್ದ ಡಿ.ನಿಶ್ಚಲ್‌ ಹಾಗೂ ಶುಭಾಂಗ್‌ ಹೆಗ್ಡೆಯನ್ನು ಕೈಬಿಡಲಾಗಿದೆ.