Vijay Hazare Trophy: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ
ಮೊದಲು ಬ್ಯಾಟ್ ಮಾಡಿದ ಮಿಜೋರಾಂ 37.3 ಓವರ್‌ಗಳಲ್ಲಿ 123ಕ್ಕೆ ಸರ್ವಪತನ ಕಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಕೌಶಿಕ್ 8.2 ಓವರಲ್ಲಿ 5 ಮೇಡಿನ್ ಸಹಿತ 7 ರನ್ ನೀಡಿ 4 ವಿಕೆಟ್ ಕಿತ್ತರು. ಗೌತಮ್ 3, ಮನೋಜ್ 2 ವಿಕೆಟ್ ಪಡೆದರು.
ಅಹಮದಾಬಾದ್(ಡಿ.06): ನಿರ್ಣಾಯಕ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 6 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿದ 4 ಬಾರಿ ಚಾಂಪಿಯನ್ ಕರ್ನಾಟಕ, 2023ರ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಯಶಸ್ವಿಯಾಗಿದೆ. ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಜಯಿಸಿದ ರಾಜ್ಯ ತಂಡ 24 ಅಂಕದೊಂದಿಗೆ ‘ಸಿ’ ಗುಂಪಿನಲ್ಲಿ 2ನೇ ಸ್ಥಾನಿಯಾಯಿತು. ಹರ್ಯಾಣ(28 ಅಂಕ) ಗುಂಪಿನಿಂದ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೇರಿತು.
ಮೊದಲು ಬ್ಯಾಟ್ ಮಾಡಿದ ಮಿಜೋರಾಂ 37.3 ಓವರ್‌ಗಳಲ್ಲಿ 123ಕ್ಕೆ ಸರ್ವಪತನ ಕಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಕೌಶಿಕ್ 8.2 ಓವರಲ್ಲಿ 5 ಮೇಡಿನ್ ಸಹಿತ 7 ರನ್ ನೀಡಿ 4 ವಿಕೆಟ್ ಕಿತ್ತರು. ಗೌತಮ್ 3, ಮನೋಜ್ 2 ವಿಕೆಟ್ ಪಡೆದರು. ಸುಲಭ ಗುರಿಯನ್ನು ಬೆನ್ನತ್ತಲು ರಾಜ್ಯ ತಂಡ 17.1 ಓವರ್‌ಗಳನ್ನು ತೆಗೆದುಕೊಂಡಿತು. ಮಯಾಂಕ್ ಔಟಾಗದೆ 48, ಮನೀಶ್ ಪಾಂಡೆ ಔಟಾಗದೆ 38 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
2027ರ ಏಕದಿನ ವಿಶ್ವಕಪ್ ಟೂರ್ನಿ ವೇಳೆಗೆ ಟೀಂ ಇಂಡಿಯಾದ ಈ ಆಟಗಾರರಿಗೆ ಎಷ್ಟು ವಯಸ್ಸಾಗಿರಲಿದೆ?
ಸ್ಕೋರ್:
ಮಿಜೋರಾಂ 37.2 ಓವರ್‌ಗಳಲ್ಲಿ 124/10 (ಥಂಕುಮಾ 37, ಕೌಶಿಕ್ 4-7, ಗೌತಮ್ 3-49)
ಕರ್ನಾಟಕ 17.1 ಓವರ್‌ಗಳಲ್ಲಿ 126/4 (ಮಯಾಂಕ್ 48*, ಮನೀಶ್ 38*, ಮೋಹಿತ್ 3-37)
ಕರ್ನಾಟಕ-ವಿದರ್ಭ ಡಿ.11ಕ್ಕೆ ಕ್ವಾರ್ಟರ್
2019-20ರ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಕರ್ನಾಟಕ ಕ್ವಾರ್ಟರ್‌ನಲ್ಲಿ ಡಿ.11ರಂದು ವಿದರ್ಭ ವಿರುದ್ಧ ಆಡಲಿದೆ. ‘ಬಿ’ ಗುಂಪಿನಲ್ಲಿದ್ದ ವಿದರ್ಭ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 20 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಪ್ರವೇಶಿಸಿದೆ. ವಿದರ್ಭ ಈ ವರೆಗೂ ಫೈನಲ್ ಪ್ರವೇಶಿಸಿಲ್ಲ.
RCB ಪರ IPL ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸಿದ ಕ್ರಿಕೆಟಿಗರಿವರು..!
ಮುಂಬೈ, ರಾಜಸ್ಥಾನ ನೇರವಾಗಿ ಕ್ವಾರ್ಟರ್‌ಗೆ
ಟೂರ್ನಿಯಲ್ಲಿ ಒಟ್ಟು 6 ತಂಡಗಳು ನೇರವಾಗಿ ಕ್ವಾರ್ಟರ್‌ಗೇರಿವೆ. ರಾಜಸ್ಥಾನ, ಹರ್ಯಾಣ, ಮುಂಬೈ, ವಿದರ್ಭ, ತಮಿಳುನಾಡು ತಂಡಗಳು ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೇರಿದರೆ, 2ನೇ ಸ್ಥಾನ ಪಡೆದ ತಂಡಗಳ ಪೈಕಿ ಉತ್ತಮ ಅಂಕ ಹೊಂದಿದ ಕಾರಣ ಕರ್ನಾಟಕಕ್ಕೂ ನೇರ ಅರ್ಹತೆ ಲಭಿಸಿತು. ಉಳಿದಂತೆ ಬಂಗಾಳ, ಗುಜರಾತ್, ಕೇರಳ, ಮಹಾರಾಷ್ಟ್ರ ತಮ್ಮ ತಮ್ಮ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಪ್ರಿ ಕ್ವಾರ್ಟರ್ ಪ್ರವೇಶಿಸಿದವು. ಪ್ರಿ ಕ್ವಾರ್ಟರ್ ಪಂದ್ಯಗಳು ಡಿ.9ಕ್ಕೆ ನಿಗದಿಯಾಗಿವೆ. ಡಿ.11ಕ್ಕೆ ಕ್ವಾರ್ಟರ್ ಫೈನಲ್, ಡಿ.13 ಹಾಗೂ 14ಕ್ಕೆ ಸೆಮಿಫೈನಲ್ ಪಂಧ್ಯಗಳು ನಡೆಯಲಿವೆ. ಡಿ.16ಕ್ಕೆ ಫೈನಲ್ ನಿಗದಿಯಾಗಿದೆ. ನಾಕೌಟ್ ಪಂದ್ಯಗಳಿಗೆ ರಾಜ್‌ಕೋಟ್ ಆತಿಥ್ಯ ವಹಿಸಲಿದೆ.
ನಾಕೌಟ್ ವೇಳಾಪಟ್ಟಿ
ಪ್ರಿ ಕ್ವಾರ್ಟರ್ 1: ಬಂಗಾಳ vs ಗುಜರಾತ್ (ಡಿ.9)
ಪ್ರಿ ಕ್ವಾರ್ಟರ್ 2: ಕೇರಳ vs ಮಹಾರಾಷ್ಟ್ರ (ಡಿ.9)
ಕ್ವಾರ್ಟರ್ ಫೈನಲ್ 1: ಹರ್ಯಾಣ vs ಪ್ರಿ ಕ್ವಾರ್ಟರ್ 1 ವಿಜೇತ ತಂಡ (ಡಿ.11)
ಕ್ವಾರ್ಟರ್ ಫೈನಲ್ 2: ರಾಜಸ್ಥಾನ vs ಪ್ರಿ ಕ್ವಾರ್ಟರ್ 2 ವಿಜೇತ ತಂಡ (ಡಿ.11)
ಕ್ವಾರ್ಟರ್ ಫೈನಲ್ 3: ಕರ್ನಾಟಕ vs ವಿದರ್ಭ (ಡಿ.11)
ಕ್ವಾರ್ಟರ್ ಫೈನಲ್ 4: ಮುಂಬೈ vs ತಮಿಳುನಾಡು (ಡಿ.11)