ವಿಜಯ್ ಹಜಾರೆ ಟ್ರೋಫಿ: ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿ ಕರ್ನಾಟಕ
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ರವಿಕುಮಾರ್ ಸಮರ್ಥ್ ನೇತೃತ್ವದ ಕರ್ನಾಟಕ ತಂಡವಿಂದು ಒಡಿಶಾ ವಿರುದ್ದ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ಫೆ.24): ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಬಿಹಾರ ವಿರುದ್ಧ ಅಮೋಘ ಗೆಲುವಿನ ನಂತರ ಹಾಲಿ ಚಾಂಪಿಯನ್ ಕರ್ನಾಟಕ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಬುಧವಾರ ಇಲ್ಲಿನ ಆಲೂರು ಮೈದಾನದಲ್ಲಿ ಒಡಿಶಾ ವಿರುದ್ಧ ಸೆಣಸಲಿದ್ದು, ನೆಟ್ ರನ್‌ರೇಟ್ ಸಹ ಕಾಪಾಡಿಕೊಳ್ಳುವ ಒತ್ತಡ ತಂಡದ ಮೇಲಿದೆ. ಕರ್ನಾಟಕ ಎದುರು ಟಾಸ್ ಗೆದ್ದ ಒಡಿಶಾ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.
ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಸೋತಿದ್ದ ಕರ್ನಾಟಕ, ನಾಕೌಟ್ ಹಂತಕ್ಕೆ ಪ್ರವೇಶಿಸಬೇಕಿದ್ದರೆ ಉಳಿದೆಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಈ ಪಂದ್ಯ ಸೇರಿದಂತೆ ‘ಸಿ’ ಗುಂಪಿನಲ್ಲಿ ತಂಡಕ್ಕಿನ್ನು 3 ಪಂದ್ಯ ಬಾಕಿ ಇದೆ.
ವಿಜಯ್ ಹಜಾರೆ ಟ್ರೋಫಿ: ಬಿಹಾರ ವಿರುದ್ಧ ರಾಜ್ಯಕ್ಕೆ 'ಸಮರ್ಥ' ಜಯ
ದೇವದತ್ ಪಡಿಕ್ಕಲ್ ಸತತ 2 ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿದ್ದರೆ, ನಾಯಕ ಆರ್.ಸಮರ್ಥ್ ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಲಯ ಕಂಡುಕೊಂಡಿದ್ದಾರೆ. ಅನಿರುದ್ಧ ಜೋಶಿ ಮೇಲೆ ಪಂದ್ಯದ ಪಂದ್ಯಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅಭಿಮನ್ಯು ಮಿಥುನ್ ನೇತೃತ್ವದ ಬೌಲಿಂಗ್ ಪಡೆ ಉತ್ತಮ ದಾಳಿ ಸಂಘಟಿಸುತ್ತಿದ್ದು, ರಾಜ್ಯ ತಂಡ ಬೌಲರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.
ಮತ್ತೊಂದೆಡೆ ಒಡಿಶಾ ಆಡಿರುವ ಎರಡೂ ಪಂದ್ಯಗಳನ್ನು ಸೋತಿದ್ದು, ನಾಕೌಟ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ತಂಡ ಈ ಪಂದ್ಯದಲ್ಲಿ ಗೆದ್ದು ಕರ್ನಾಟಕದ ನಾಕೌಟ್ ಹಾದಿಯನ್ನು ಕಠಿಣಗೊಳಿಸುವ ನಿರೀಕ್ಷೆಯಲ್ಲಿದೆ.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ