2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ, ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ತಮಿಳುನಾಡನ್ನು 4 ವಿಕೆಟ್‌ಗಳಿಂದ ಸೋಲಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಮಯಾಂಕ್, ಶ್ರೀಜಿತ್ ಮತ್ತು ಶ್ರೇಯಸ್ ಗೋಪಾಲ್ ಅರ್ಧಶತಕಗಳ ನೆರವಿನಿಂದ 289 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.

ಅಹಮದಾಬಾದ್‌: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿ ಬೀಗಿದೆ. ನೆರೆಯ ತಮಿಳುನಾಡು ಎದುರು 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಹ್ಯಾಟ್ರಿಕ್ ಗೆಲುವು ಸಾಧಿಸಿ ಬೀಗಿದೆ.

ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲೇ ಜಾರ್ಖಂಡ್ ಎದುರು ದಾಖಲೆಯ ಮೊತ್ತವನ್ನು ಬೆನ್ನತ್ತಿ ರೋಚಕ ಗೆಲುವು ಸಾಧಿಸಿತ್ತು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ ಕೇರಳ ಎದುರು 8 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತ್ತು. ಇದೀಗ ತಮಿಳುನಾಡು ಎದುರು ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ತಮಿಳುನಾಡು ನೀಡಿದ್ದ 289 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಆರಂಭದಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಪಡಿಕ್ಕಲ್, ತಮಿಳುನಾಡು ಎದುರು 12 ಎಸೆತಗಳಲ್ಲಿ 5 ಬೌಂಡರಿ ಸಹಿತ 22 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕರುಣ್ ನಾಯರ್ 17 ಹಾಗೂ ಸ್ಮರಣ್ ರವಿಚಂದ್ರನ್ 15 ಕೂಡಾ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.

ಕರ್ನಾಟಕದ ಸಂಘಟಿತ ಪ್ರದರ್ಶನಕ್ಕೆ ಒಲಿದ ಗೆಲುವು:

ಆರಂಭದಲ್ಲಿ ಕರ್ನಾಟಕ ತಂಡವು ಕೆಲವು ವಿಕೆಟ್‌ಗಳನ್ನು ಕಳೆದುಕೊಂಡಿತಾದರೂ, ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಕೃಷ್ಣನ್ ಶ್ರೀಜಿತ್ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ನಾಯಕ ಮಯಾಂಕ್ ಅಗರ್‌ವಾಲ್ 58 ರನ್ ಸಿಡಿಸಿದರೆ, ಶ್ರೀಜಿತ್ 78 ಎಸೆತಗಳಲ್ಲಿ 77 ರನ್ ಸಿಡಿಸಿದರು. ಇನ್ನು ಶ್ರೇಯಸ್ ಗೋಪಾಲ್ ಆಕರ್ಷಕ 55 ರನ್ ಸಿಡಿಸಿದರು. ಕೊನೆಯಲ್ಲಿ ಅಭಿನವ್ ಮನೋಹರ್ ಅಜೇಯ 20 ಹಾಗೂ ವಿದ್ಯಾಧರ್ ಪಾಟೀಲ್ ಅಜೇಯ 17 ರನ್ ಸಿಡಿಸುವ ಮೂಲಕ ಇನ್ನೂ 17 ಎಸೆತ ಬಾಕಿ ಇರುವಂತೆಯೇ ಕರ್ನಾಟಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ತಮಿಳುನಾಡು ತಂಡವು ನಾಯಕ ಎನ್ ಜಗದೀಶನ್(65) ಹಾಗೂ ಪ್ರದೋಷ್ ಪೌಲ್(57) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ 288 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.

ಅಭಿಲಾಷ್‌ ಶೆಟ್ಟಿಗೆ 4 ವಿಕೆಟ್ ಗೊಂಚಲು:

ಉಡುಪಿ ಮೂಲದ ಪ್ರತಿಭಾನ್ವಿತ ವೇಗಿ ಅಭಿಲಾಷ್ ಶೆಟ್ಟಿ ಮಾರಕ ದಾಳಿಗೆ ತಮಿಳುನಾಡು ತಂಡವು ತತ್ತರಿಸಿ ಹೋಯಿತು. ಅಭಿಲಾಷ್ ಶೆಟ್ಟಿ 57 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ವಿದ್ಯಾಧರ್ ಪಾಟೀಲ್ ಹಾಗೂ ಶ್ರೀಶಾ ಆಚಾರ್ ತಲಾ ಎರಡು ಮತ್ತು ಶ್ರೇಯಸ್ ಗೋಪಾಲ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.