ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ತಂಡಗಳು ಅಂತಿಮ| ನಿಯಮದ ಪ್ರಕಾರ ಅಗ್ರ 5ರ ಬಳಿಕ ಉತ್ತಮ ಅಂಕ ಇಲ್ಲವೇ ನೆಟ್‌ ರನ್‌ರೇಟ್‌ ಹೊಂದಿರುವ 2 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇ

ನವದೆಹಲಿ(ಮಾ.02): ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಕ್ವಾರ್ಟರ್‌ ಫೈನಲ್‌ಗೆ ತಂಡಗಳು ಅಂತಿಮಗೊಂಡಿವೆ. ಸೋಮವಾರ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಎಲೈಟ್‌ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಗುಜರಾತ್‌, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಆಂಧ್ರ, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕ, ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಮುಂಬೈ, ‘ಇ’ ಗುಂಪುನಲ್ಲಿ ಅಗ್ರಸ್ಥಾನ ಪಡೆದ ಸೌರಾಷ್ಟ್ರ ಕ್ವಾರ್ಟರ್‌ ಫೈನಲ್‌ಗೇರಿವೆ.

ನಿಯಮದ ಪ್ರಕಾರ ಅಗ್ರ 5ರ ಬಳಿಕ ಉತ್ತಮ ಅಂಕ ಇಲ್ಲವೇ ನೆಟ್‌ ರನ್‌ರೇಟ್‌ ಹೊಂದಿರುವ 2 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಲಿವೆ. ಈ ಸ್ಥಾನಗಳನ್ನು ‘ಸಿ’ ಗುಂಪಿನಲ್ಲಿದ್ದ ಉತ್ತರ ಪ್ರದೇಶ ಹಾಗೂ ಕೇರಳ ತಂಡಗಳು ಪಡೆದಿವೆ.

ಕ್ವಾರ್ಟರ್‌ ಫೈನಲ್‌ಗೂ ಮೊದಲು ಪ್ರಿ ಕ್ವಾರ್ಟರ್‌ ಫೈನಲ್‌ ನಡೆಯಲಿದ್ದು, ಈ ಪಂದ್ಯದಲ್ಲಿ ಗುಂಪು ಹಂತದಲ್ಲಿ ಉತ್ತಮ ಅಂಕ ಇಲ್ಲವೇ ನೆಟ್‌ ರನ್‌ರೇಟ್‌ ಹೊಂದಿದ 8ನೇ ತಂಡ ಹಾಗೂ ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ಸೆಣಸಲಿವೆ. 8ನೇ ಸ್ಥಾನ ಗಳಿಸಿದ ಡೆಲ್ಲಿ ಹಾಗೂ ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನಿಯಾದ ಉತ್ತರಾಖಂಡ ಪ್ರಿ ಕ್ವಾರ್ಟರ್‌ನಲ್ಲಿ ಮುಖಾಮುಖಿಯಾಗಲಿವೆ.