ಮ್ಯಾಂಚೆಸ್ಟರ್(ಆ.07): ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಸರ್ಫರಾಜ್ ಇದೀಗ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 12 ಆಟಗಾರರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮಾಜಿ ನಾಯಕ ಸರ್ಫರಾಜ್ ಖಾನ್ ಮೈದಾನದಲ್ಲಿ ಕೈಯಲ್ಲಿ ಶೂ ಹಿಡಿದುಕೊಂಡು ಹೋಗಿ ಪಾಕ್ ಯುವ ಆಟಗಾರ ಮೊಹಮ್ಮದ್ ರಿಜ್ವಾನ್‌ಗೆ ನೀಡಿದ್ದಾರೆ.

ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಗೂ ವೀಕ್ಷಕ ವಿವರಣೆಗಾರರ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಪಾಕ್‌ ಮಾಜಿ ಕ್ರಿಕೆಟಿಗರು ಪಾಕ್‌ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರಿದ್ದಾರೆ. ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಈ ಘಟನೆಯನ್ನು ಕಟುವಾದ ಶಬ್ದಗಳಿಂದ ಖಂಡಿಸಿದ್ದಾರೆ.
  
ಆ ದೃಶ್ಯಾವಳಿಗಳು ನನಗಂತೂ ಇಷ್ಟವಾಗಲಿಲ್ಲ. ಕರಾಚಿ ಮೂಲದ ಆಟಗಾರನನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ. ನಾಲ್ಕು ವರ್ಷಗಳ ಕಾಲ ಪಾಕಿಸ್ತಾನವನ್ನು ಮುನ್ನಡೆಸಿ, ದೇಶಕ್ಕಾಗಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನಿಗೆ ನೀಡುವ ಗೌರವ ಇದಲ್ಲ. ನೀವು ಆತನ ಬಳಿ ಶೂ ಕೊಂಡೊಯ್ಯಲು ಹೇಳಿದ್ದೀರ. ಒಂದು ವೇಳೆ ಸರ್ಫರಾಜ್ ಸ್ವಯಂ ಪ್ರೇರಿತವಾಗಿ ಶೂ ತೆಗೆದುಕೊಂಡು ಹೋಗಲು ಮುಂದಾಗಿದ್ದರು, ನೀವದನ್ನು ತಡೆಯಬೇಕಾಗಿತ್ತು. ವಾಸೀಂ ಅಕ್ರಂ ಯಾವತ್ತೂ ನನಗೆ ಶೂ ತಂದು ಕೊಟ್ಟಿರಲಿಲ್ಲ ಎಂದು ಅಖ್ತರ್ ಹೇಳಿದ್ದಾರೆ.

ಪಾಕ್‌ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್..!

ಇದು ಸರ್ಫರಾಜ್ ಎಷ್ಟು ದುರ್ಬಲ ವ್ಯಕ್ತಿ ಎನ್ನುವುದನ್ನು ತೋರಿಸುತ್ತದೆ. ಈ ಕಾರಣಕ್ಕಾಗಿಯೇ ಕೋಚ್ ಮಿಕಿ ಆರ್ಥರ್ ಆತನ ಮೇಲೆ ಪ್ರಾಬಲ್ಯ ಮೆರೆದರು. ಮೈದಾನಕ್ಕೆ ಶೂ ತೆಗೆದುಕೊಂಡು ಹೋಗಿ ಕೊಡುವುದು ತಪ್ಪಲ್ಲ. ಆದರೆ ಮಾಜಿ ನಾಯಕನೊಬ್ಬ ಈ ರೀತಿ ಮಾಡಿದ್ದು ತಪ್ಪು ಎಂದು ಪೇಶಾವರ್ ಎಕ್ಸ್‌ಪ್ರೆಸ್ ಖ್ಯಾತಿಯ ಅಖ್ತರ್ ಸಮಜಾಯಿಷಿ ನೀಡಿದ್ದಾರೆ.

2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪಾಕ್‌ ನಾಯಕರಾಗಿದ್ದ ಸರ್ಫರಾಜ್ ಅಹಮ್ಮದ್ ಯಶಸ್ವಿಯಾಗಿದ್ದರು. 2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಸರ್ಫರಾಜ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.