Asianet Suvarna News Asianet Suvarna News

'ಭಾರತ ನರಕಕ್ಕೆ ಹೋಗಲಿ' ಎಂದ ಜಾವೇದ್ ಮಿಯಾಂದಾದ್‌ ಸೊಕ್ಕಡಗಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್..!

ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಹೋಗಲು ಭಾರತ ಹಿಂದೇಟು
ಪಾಕಿಸ್ತಾನಕ್ಕೆ ಬರಲಿಲ್ಲ ಎಂದರೆ ನರಕಕ್ಕೆ ಹೋಗಲಿ ಎಂದ ಮಿಯಾಂದಾದ್
ಮಿಯಾಂದಾದ್‌ಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡಿದ ವೆಂಕಟೇಶ್ ಪ್ರಸಾದ್

Venkatesh Prasad epic one line reply to Javed Miandad on India can go to hell remark kvn
Author
First Published Feb 7, 2023, 4:37 PM IST

ಬೆಂಗಳೂರು(ಫೆ.07): ಪಾಕಿಸ್ತಾನದ ವಿಚಾರವೆಂದು ಬಂದರೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ಯಾವತ್ತೂ ಖಡಕ್‌ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಅದು ಬೆಂಗಳೂರಿನಲ್ಲಿ ನಡೆದ 1996ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಅಮಿರ್ ಸೋಹೆಲ್‌ಗೆ ನೀಡಿದ ತಿರುಗೇಟೇ ಆಗಲಿ ಅಥವಾ ಇದೀಗ ಜಾವೇದ್ ಮಿಯಾಂದಾದ್‌ಗೆ ನೀಡಿದ ಖಡಕ್ ರಿಪ್ಲೇ ಆಗಲಿ ಎಲ್ಲವೂ ಅಪ್ಪಟ ಕ್ಲಾಸಿಕ್‌. ಪಾಕಿಸ್ತಾನದ ವಿರುದ್ದ ಮೈದಾನದೊಳಗೆ ಆಗಲಿ ಅಥವಾ ಮೈದಾನದಾಚೆಗೆ ವೆಂಕಿ ಯಾವಾಗಲೂ ಮುಟ್ಟಿ ನೋಡಿಕೊಳ್ಳುವಂತ ಉತ್ತರ ನೀಡುವಲ್ಲಿ ಸಿದ್ದಹಸ್ತರಾಗಿದ್ದಾರೆ. 

ಇದೀಗ 2023ರ ಏಷ್ಯಾಕಪ್ ಟೂರ್ನಿಯ ಬಗ್ಗೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡಮಟ್ಟದ ಚರ್ಚೆ ಚಾಲ್ತಿಯಲ್ಲಿದೆ. 2023ರ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯವನ್ನು ವಹಿಸಿದೆ. ಒಂದು ವೇಳೆ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆದರೇ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯಲಿದೆ. ಇದರ ಬದಲು, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ನಡೆದರೆ ಮಾತ್ರ, ಟೀಂ ಇಂಡಿಯಾ ಆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಖಚಿತ ನಿಲುವನ್ನು ಪ್ರಕಟಿಸಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಇಂತಹವುದಕ್ಕೆಲ್ಲಾ ಬ್ರೇಕ್ ಹಾಕಬೇಕು. ಭಾರತ ತಂಡವು ಒಂದು ವೇಳೆ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದೇ ಹೋದರೂ ತೊಂದರೆಯೇನಿಲ್ಲ. ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಬರಲಿಲ್ಲ ಎಂದರೆ, ನರಕಕ್ಕೆ ಬೇಕಿದ್ದರೇ ಹೋಗಲಿ ಎಂದು ಅಸಮಾಧಾನ ಹೊರಹಾಕಿದ್ದರು.

" ನಾನು ಈ ಮೊದಲೂ ಹೇಳಿದ್ದೇನೆ. ಭಾರತ ತಂಡವು ಪಾಕಿಸ್ತಾನ ಬರುವುದಿಲ್ಲ ಎಂದಾದರೇ ನರಕಕ್ಕೆ ಹೋಗಲಿ. ನಮಗೇನೂ ತೊಂದರೆಯಿಲ್ಲ. ಭಾರತವು ಬರುವುದನ್ನು ಐಸಿಸಿ ಖಚಿತಪಡಿಸಬೇಕು. ಒಂದು ವೇಳೆ ಅದು ಐಸಿಸಿಯನ್ನು ನಿಯಂತ್ರಿಸುವುದಾದರೇ, ಅಂತಹ ಆಡಳಿತ ಮಂಡಳಿಯ ಅಗತ್ಯವಾದರೂ ಏನಿದೆ?" ಎಂದು ಮಿಯಾಂದಾದ್ ಪ್ರಶ್ನಿಸಿದ್ದರು. 

"ಪ್ರತಿಯೊಂದು ತಂಡಕ್ಕೂ ಒಂದೇ ರೀತಿಯ ನೀತಿ ನಿಯಮಗಳು ಅನ್ವಯವಾಗಬೇಕು. ಅವರೆಷ್ಟೇ ಬಲಿಷ್ಠವಾಗಿದ್ದರೂ ಸಹಾ, ಅವರು ಇದಕ್ಕೆ ಬದ್ದವಾಗಿರಬೇಕು. ಭಾರತ ಕ್ರಿಕೆಟ್‌ ನಡೆಸುತ್ತಿಲ್ಲ. ಅದು ತವರಿನಲ್ಲಿ ಬಲಿಷ್ಠ ತಂಡವಾಗಿಯೇ ಇರಬಹುದು, ಹಾಗಂತ ನಮಗಲ್ಲ. ಅದೇ ರೀತಿ ಜಗತ್ತಿಗೂ ಅಲ್ಲ. ಬನ್ನಿ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಿ. ನೀವ್ಯಾಕೆ ಇಲ್ಲಿಗೆ ಬರಲು ಹಿಂದೇಟು ಹಾಕುತ್ತೀರ?. ಒಂದು ವೇಳೆ ಭಾರತ ತಂಡವು ಪಾಕಿಸ್ತಾನದಲ್ಲಿ ಸೋತರೆ, ಅಲ್ಲಿನ ಜನರು ಆ ಸೋಲನ್ನು ಸಹಿಸುವುದಿಲ್ಲ" ಎಂದು ಜಾವೇದ್ ಮಿಯಾಂದಾದ್ ಕೆಣಕಿದ್ದರೆ.

ಇದೀಗ ಜಾವೇದ್ ಮಿಯಾಂದಾದ್‌ಗೆ ವೆಂಕಟೇಶ್ ಪ್ರಸಾದ್‌, ಒಂದೇ ಸಾಲಿನಲ್ಲಿ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ. ಜಾವೇದ್ ಮಿಯಾಂದಾದ್ ಹೇಳಿಕೆಯನ್ನು ಉಲ್ಲೇಖಿಸಿ," ಆದರೆ ಅವರು ಹಿಂದೇಟು ಹಾಕುತ್ತಿರುವುದು ನರಕಕ್ಕೆ ಹೋಗುವುದಿಲ್ಲವೆಂದು" ಎಂದು ಟ್ವೀಟ್‌ ಮಾಡಿ ಖಡಕ್ ಉತ್ತರ ನೀಡಿದ್ದಾರೆ.

ಸ್ವತಃ ಪಾಕಿಸ್ತಾನವೇ ಒಂದು ನರಕವಾಗಿದ್ದು, ಅಲ್ಲಿಗೆ ಭಾರತ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿ, ಪಾಕ್‌ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಸೊಕ್ಕಡಗಿಸಿದ್ದಾರೆ.

Follow Us:
Download App:
  • android
  • ios