ಭಾರತದ ಅನುಭವಿ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. 2011ರಲ್ಲಿ ಪಾದಾರ್ಪಣೆ ಮಾಡಿದ ವೇದಾ, 48 ಏಕದಿನ ಮತ್ತು 76 ಟಿ20 ಪಂದ್ಯಗಳನ್ನಾಡಿದ್ದಾರೆ. ಭಾವನಾತ್ಮಕ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ ವೇದಾ.

ಭಾರತದ ಅನುಭವಿ ಮಹಿಳಾ ಕ್ರಿಕೆಟರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2011ರಲ್ಲಿ ಕೇವಲ 18ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಡೂರು ಮೂಲದ ವೇದಾ ಕೃಷ್ಣಮೂರ್ತಿ ಇದೀಗ ಸ್ಮರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸಣ್ಣ ಹಳ್ಳಿಯಿಂದ ಬಂದ ಆಟಗಾರ್ತಿ, ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ವೇದಾ ಇದೀಗ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ಚಿಕ್ಕಮಗಳೂರಿನ ಸಣ್ಣ ನಗರ ಕಡೂರಿನಿಂದ ಬಂದ ವೇದಾ ಕೃಷ್ಣಮೂರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ದಾಖಲಿಸುವ ಮೂಲಕ ಹಲವು ಸಣ್ಣ ನಗರದ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಇಂಗ್ಲೆಂಡ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೇದಾ ಕೃಷ್ಣಮೂರ್ತಿ, ಭಾರತ ಪರ 48 ಏಕದಿನ ಹಾಗೂ 76 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 829 ಹಾಗೂ 875 ರನ್ ಬಾರಿಸಿದ್ದಾರೆ. ಇದೀಗ ವೇದಾ ಕೃಷ್ಣಮೂರ್ತಿ ತಮ್ಮ ವಿದಾಯ ಪೋಸ್ಟ್‌ನಲ್ಲಿ, 'ದೊಡ್ಡ ಕನಸುಗಳನ್ನು ಹೊಂದಿರುವ ಸಣ್ಣ ಪಟ್ಟಣದ ಹುಡುಗಿ. ಕಡೂರಿನ ಶಾಂತ ಹಾದಿಗಳಿಂದ ಹಿಡಿದು ಹೆಮ್ಮೆಯಿಂದ ಭಾರತದ ಜೆರ್ಸಿಯನ್ನು ಧರಿಸುವವರೆಗೆ. ಈ ಆಟ ನನಗೆ ಸಂತೋಷ, ನೋವು, ಉದ್ದೇಶ ಮತ್ತು ಕುಟುಂಬ ಎಲ್ಲವನ್ನೂ ನೀಡಿತು. ಇಂದು, ನಾನು ಆಟಕ್ಕೆ ವಿದಾಯ ಹೇಳುತ್ತೇನೆ, ಆದರೆ ಕ್ರಿಕೆಟ್‌ಗೆ ಅಲ್ಲ. ನನ್ನ ಕುಟುಂಬ, ತಂಡದ ಸದಸ್ಯರು, ತರಬೇತುದಾರರು, ಸ್ನೇಹಿತರು ಮತ್ತು ತೆರೆಮರೆಯಲ್ಲಿದ್ದು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಅಭಿಮಾನಿಗಳು ನಿಮ್ಮ ಪ್ರೀತಿಗೆ ಆಭಾರಿ ಎಂದು ಕೃತಜ್ಞತೆ ಅರ್ಪಿಸಿದ್ದಾರೆ.

View post on Instagram

ನನಗೆ ಜೀವನ ನೀಡಿದ ಈ ಕ್ರಿಕೆಟ್‌ಗೆ ನಾನು ವಾಪಾಸ್ ನೀಡಲು ರೆಡಿಯಿದ್ದೇನೆ. ನಾನು ನನ್ನ ಹೃದಯದಲ್ಲಿ ಕಿಚ್ಚಿನೊಂದಿಗೆ ಮತ್ತು ಪ್ರತಿ ಹೆಜ್ಜೆಯಲ್ಲೂ ಹೆಮ್ಮೆಯೊಂದಿಗೆ ಆಡಿದೆ. ಯಾವಾಗಲೂ ತಂಡಕ್ಕಾಗಿ ಹಾಗೂ ಭಾರತಕ್ಕಾಗಿ ನನ್ನ ಹೃಯದ ಮಿಡಿಯಲಿದೆ ಎಂದು ವೇದಾ ಕೃಷ್ಣಮೂರ್ತಿ ಬರೆದುಕೊಂಡಿದ್ದಾರೆ.

ವೇದಾ ಕೃಷ್ಣಮೂರ್ತಿ ಭಾರತ ಪರ ಹಲವಾರು ಐತಿಹಾಸಿಕ ಹಾಗೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಈ ಪೈಕಿ 2017ರ ಐಸಿಸಿ ಏಕದಿನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವು ಫೈನಲ್ ಪ್ರವೇಶಿಸಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತ್ತು. ಆಗ ವೇದಾ ಕೃಷ್ಣಮೂರ್ತಿ ಭಾರತ ತಂಡದ ಭಾಗವಾಗಿದ್ದರು. ಇನ್ನು 2020ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡವು ಫೈನಲ್ ಪ್ರವೇಶಿಸಿ ಆಸೀಸ್ ಎದುರು ಮುಗ್ಗರಿಸಿತ್ತು. ಆಗಲೂ ವೇದಾ ಕೃಷ್ಣಮೂರ್ತಿ ಭಾರತ ತಂಡದ ಭಾಗವಾಗಿದ್ದರು.

ವೇದಾ ಕೃಷ್ಣಮೂರ್ತಿ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಪಾಲ್ಗೊಂಡ ಮೂರನೇ ಭಾರತೀಯ ಮಹಿಳಾ ಆಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಮೂರನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್ ಲೀಗ್‌ನಲ್ಲಿ ವೇದಾ ಕೃಷ್ಣಮೂರ್ತಿ ಹೋಬರ್ಟ್ ಹರಿಕೇನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ದೇಶಿ ಕ್ರಿಕೆಟ್‌ನಲ್ಲಿ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವೇದಾ ಕೃಷ್ಣಮೂರ್ತಿ ಆ ಬಳಿಕ ರೈಲ್ವೇಸ್ ತಂಡವನ್ನು ಪ್ರತಿನಿಧಿಸಿದ್ದರು.

ಇನ್ನು ಇತ್ತೀಚೆಗಷ್ಟೇ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಖ್ಯಾತ ಪಾಡ್‌ಕಾಸ್ಟ್ ಬೆಂಗಳೂರು ಬಝ್‌ನಲ್ಲಿ ಪಾಲ್ಗೊಂಡಿದ್ದ ವೇದಾ ಕೃಷ್ಣಮೂರ್ತಿ, ತಮ್ಮ ಕ್ರಿಕೆಟ್ ಪಯಣ, ವೃತ್ತಿ ಬದುಕು ಹಾಗೂ ಖಾಸಗಿ ಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಸಾಕಷ್ಟು ಸಮಯದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ವೇದಾ ಕೃಷ್ಣಮೂರ್ತಿ ಕ್ರಿಕೆಟ್ ವಿಶ್ಲೇಷಕಿಯಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ವೇದಾ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಶುಭ ಹಾರೈಕೆಗಳು.

ವೇದಾ ಕೃಷ್ಣಮೂರ್ತಿ ಬೆಂಗಳೂರು ಬಝ್‌ ಪಾಡ್‌ಕಾಸ್ಟ್‌ನಲ್ಲಿ ಮನಬಿಚ್ಚಿ ಮಾತನಾಡಿದ್ದು ಹೀಗೆ:

YouTube video player