ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಅಂಡರ್-19 ತಂಡದ 14 ವರ್ಷದ ವೈಭವ್ ಸೂರ್ಯವಂಶಿ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ಒಟ್ಟಾರೆ 78 ಎಸೆತಗಳಲ್ಲಿ 143 ರನ್ ಸಿಡಿಸಿದರು.
ಬೆಂಗಳೂರು (ಜು.5): ಟೀಮ್ ಇಂಡಿಯಾ ಬರ್ಮಿಂಗ್ ಹ್ಯಾಂ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸುತ್ತಿದೆ. ಇನ್ನೊಂದೆಡೆ, ಭಾರತದ 19 ವಯೋಮಿತಿ ತಂಡ ಕೂಡ ಇಂಗ್ಲೆಂಡ್‌ನಲ್ಲಿ ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಅಂಡರ್-19 ಟೀಮ್ ಆತಿಥೇಯ ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ 14 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಬ್ಬರಿಸಿದ್ದಾರೆ.
ಐಪಿಎಲ್‌ನಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದ ವೈಭವ್ ಸೂರ್ಯವಂಶಿ, ಹಾಲಿ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ 48 ರನ್ (19 ಎಸೆತ, 3 ಬೌಂಡರಿ, 5 ಸಿಕ್ಸರ್), 45 ರನ್(34 ಎಸತ, 5 ಬೌಂಡರಿ, 3 ಸಿಕ್ಸರ್) ಹಾಗೂ 86 ರನ್ (31 ಎಸೆತ, 6 ಬೌಂಡರಿ, 9 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಆದರೆ, ಶನಿವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಇವರ ಬ್ಯಾಟಿಂಗ್ ಅಬ್ಬರ ಹೇಗಿತ್ತೆಂದರೆ 183.33 ಸ್ಟ್ರೈಕ್ ರೇಟ್‌ನಲ್ಲಿ ಸ್ಫೋಟಕ ಶತಕ ಬಾಎಇಸಿ ಮಿಂಚಿದ್ದಾರೆ. ಸರಣಿಯ ಎಲ್ಲಾ ಪಂದ್ಯಗಳಲ್ಲೂ 45 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿರುವುದು ಅವರ ಸ್ಥಿರ ಆಟಕ್ಕೆ ಸಾಕ್ಷಿಯಾಗಿದೆ.
ವೋರ್ಸೆಸ್ಟರ್‌ನ ನ್ಯೂ ರೋಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 14 ರನ್ ಬಾರಿಸುವ ವೇಳೆಗೆ ಆಯುಶ್ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ವೈಭವ್ ಸೂರ್ಯವಂಶಿಗೆ ಜೊತೆಯಾದ ವಿಹಾನ್ ಮಲ್ಹೋತ್ರಾ 2ನೇ ವಿಕೆಟ್‌ಗೆ 219 ರನ್ ಜೊತೆಯಾಟವಾಡಿದರು. ವಿಹಾನ್ ನಿಧಾನಗತಿಯ ಆಟಕ್ಕೆ ಮುಂದಾದರೆ, ವೈಭವ್ ಸೂರ್ಯವಂಶಿ ಮಾತ್ರ ಸಿಕ್ಕಿದ್ದ ಎಸೆತಗಳಲ್ಲ ಬೌಂಡರಿ ಸಿಕ್ಸರ್ ಸಿಡಿಸುತ್ತಾ ಅಬ್ಬರಿಸಿದರು. ಕೇವಲ 52 ಎಸೆತಗಳಲ್ಲಿ ವೈಭವ್ ತಮ್ಮ ಶತಕ ಪೂರೈಸಿದರು. ಇದರಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್‌ಗಳಿದ್ದವು. ಇದರೊಂದಿಗ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮನ್ನ ಇಷ್ಟು ಕಡಿಮೆ ಎಸೆತಗಳಲ್ಲಿ ಯಾರೂ ಕೂಡ ಶತಕ ಬಾರಿಸಿರಲಿಲ್ಲ.
ತಮ್ಮ 78 ಎಸೆತಗಳಲ್ಲಿ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಹಾಗೂ 10 ಅಮೋಘ ಸಿಕ್ಸರ್‌ಗಳೊಂದಿಗೆ ಅವರು 143 ರನ್ ಬಾರಿಸಿ 28ನೇ ಓವರ್‌ನಲ್ಲಿ ಔಟಾದರು. ಇವರಿಗೆ ಉತ್ತಮ ಸಾಥ್ ನೀಡಿದ ವಿಹಾನ್ 121 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 129 ರನ್ ಬಾರಿಸಿದರು. ಇವರಿಬ್ಬರ ಇನ್ನಿಂಗ್ಸ್‌ನಿಂದ ಭಾರತ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 363 ರನ್‌ಗಳ ಭರ್ಜರಿ ಮೊತ್ತ ಸಂಪಾದಿಸಿತು.