ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಆಟಗಾರ ವೈಭವ್ ಸೂರ್ಯವಂಶಿ, ಈ ಬಾರಿಯ ಐಪಿಎಲ್‌ನಲ್ಲಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ತನ್ನ 1.10 ಕೋಟಿ ರೂ. ಮೂಲ ಬೆಲೆಗಿಂತಲೂ ಹೆಚ್ಚಾಗಿ, ಪಂದ್ಯ ಶುಲ್ಕ ಮತ್ತು ವಿವಿಧ ಪ್ರಶಸ್ತಿಗಳ ಮೂಲಕ ಈ ಸೀಸನ್ ಒಂದರಲ್ಲೇ ಸುಮಾರು 3 ಕೋಟಿ ರೂ. ಸಂಪಾದಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಅಹಮದಾಬಾದ್: ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈ ಸೀಸನ್‌ನ 16 ಪಂದ್ಯಗಳಿಂದ 776 ರನ್ ಚಚ್ಚಿ 'ಆರೆಂಜ್ ಕ್ಯಾಪ್' ಗೆದ್ದ ಈತ, ಹರಾಜಿನಲ್ಲಿ ತನಗೆ ಸಿಕ್ಕಿದ್ದ ಬೆಲೆಗಿಂತ ತನ್ನ ಪ್ರತಿಭೆ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ್ದಾನೆ.
ಕಳೆದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ವೈಭವ್‌ನನ್ನು 1.10 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ಸೀಸನ್‌ನಲ್ಲೂ ತಂಡ ಇವನನ್ನು 1.10 ಕೋಟಿ ರೂಪಾಯಿಗೇ ಉಳಿಸಿಕೊಂಡಿತ್ತು. ಆದರೆ, ಟೂರ್ನಿಯುದ್ದಕ್ಕೂ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ವೈಭವ್ ಈ ಸೀಸನ್ ಒಂದರಲ್ಲೇ ಸುಮಾರು 3 ಕೋಟಿ ರೂಪಾಯಿ ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಅತಿ ಕಿರಿಯ ಆಟಗಾರ ಸೂರ್ಯವಂಶಿ
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್(ಗರಿಷ್ಠ ರನ್) ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. 15 ವರ್ಷದ ವೈಭವ್ ಈ ಬಾರಿ 16 ಪಂದ್ಯದಲ್ಲಿ 776 ರನ್ ಗಳಿಸಿದ್ದಾರೆ. ಕಳೆದ ವರ್ಷ ಸಾಯಿ ಸುದರ್ಶನ್ 15 ಪಂದ್ಯಗಳಲ್ಲಿ 759 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆಗ ಅವರಿಗೆ 23 ವರ್ಷ, 231 ದಿನಗಳಾಗಿತ್ತು. ಅದಕ್ಕೂ ಮುನ್ನ 2023ರಲ್ಲಿ ಶುಭ್‌ಮನ್ ಗಿಲ್ ತಮಗೆ 23 ವರ್ಷ, 263 ದಿನಗಳಾಗಿದ್ದಾಗ ಆರೆಂಜ್ ಕ್ಯಾಪ್ ಪಡೆದಿದ್ದರು.
ಎಲ್ಲಾ ಪ್ರಶಸ್ತಿಗಳನ್ನು ಒಬ್ಬನೇ ಬಾಚಿಕೊಂಡ!
ರಾಜಸ್ಥಾನ ರಾಯಲ್ಸ್ ಫೈನಲ್ ತಲುಪದಿದ್ದರೂ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈಭವ್ ಸೂರ್ಯವಂಶಿಯೇ ಸ್ಟಾರ್ ಆಗಿದ್ದ. ಟೂರ್ನಿಯ 'ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್' (ಅತ್ಯಂತ ಮೌಲ್ಯಯುತ ಆಟಗಾರ) ಸೇರಿದಂತೆ ಬಹುತೇಕ ಪ್ರಶಸ್ತಿಗಳನ್ನು ವೈಭವ್ ಒಬ್ಬನೇ ಬಾಚಿಕೊಂಡ.
ಸಿಕ್ಕ ಪ್ರಮುಖ ಪ್ರಶಸ್ತಿಗಳು ಮತ್ತು ನಗದು ಬಹುಮಾನ:
ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್: 15 ಲಕ್ಷ ರೂ.
ಆರೆಂಜ್ ಕ್ಯಾಪ್ (ಅತಿ ಹೆಚ್ಚು ರನ್): 10 ಲಕ್ಷ ರೂ.
ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್: 10 ಲಕ್ಷ ರೂ. (ಜೊತೆಗೆ ಟಾಟಾ ಸಿಯೆರಾ ಕಾರ್)
ಸೂಪರ್ ಸಿಕ್ಸಸ್ ಆಫ್ ದಿ ಸೀಸನ್ (72 ಸಿಕ್ಸರ್‌ಗಳು): 10 ಲಕ್ಷ ರೂ.
ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: 10 ಲಕ್ಷ ರೂ.
ಕೇವಲ ಮ್ಯಾಚ್ ಫೀಸ್‌ನಿಂದಲೇ 1.20 ಕೋಟಿ ರೂ.
ಬೇಸಿಕ್ ಕಾಂಟ್ರ್ಯಾಕ್ಟ್ ಮೊತ್ತವಾದ 1.10 ಕೋಟಿ ರೂಪಾಯಿ ಜೊತೆಗೆ, ಐಪಿಎಲ್‌ನಲ್ಲಿ ಆಡುವ ಪ್ರತಿ ಪಂದ್ಯಕ್ಕೂ ಆಟಗಾರರಿಗೆ 7.5 ಲಕ್ಷ ರೂಪಾಯಿ ಮ್ಯಾಚ್ ಫೀ ಸಿಗುತ್ತದೆ. ಈ ಸೀಸನ್‌ನಲ್ಲಿ ವೈಭವ್ ರಾಜಸ್ಥಾನ ರಾಯಲ್ಸ್ ಪರ 16 ಪಂದ್ಯಗಳನ್ನು ಆಡಿದ್ದ. ಇದರಿಂದಲೇ ಆತನಿಗೆ 1.20 ಕೋಟಿ ರೂಪಾಯಿ ಸಿಕ್ಕಿದೆ. ಕಾಂಟ್ರ್ಯಾಕ್ಟ್ ಮೊತ್ತ 1.10 ಕೋಟಿ ಮತ್ತು ಮ್ಯಾಚ್ ಫೀ 1.20 ಕೋಟಿ ಸೇರಿಸಿದರೆ, ವೈಭವ್‌ನ ಆದಾಯ 2.30 ಕೋಟಿ ಆಗುತ್ತದೆ. ಇದರ ಜೊತೆಗೆ ಫೈನಲ್ ವೇದಿಕೆಯಲ್ಲಿ ಸಿಕ್ಕ 55 ಲಕ್ಷ ರೂಪಾಯಿ ನಗದು ಬಹುಮಾನವೂ ಸೇರಿದೆ.
ಅಷ್ಟೇ ಅಲ್ಲ, ಲೀಗ್ ಪಂದ್ಯಗಳಲ್ಲಿ 'ಪ್ಲೇಯರ್ ಆಫ್ ದಿ ಮ್ಯಾಚ್', 'ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಮ್ಯಾಚ್', 'ಮೋಸ್ಟ್ ಸಿಕ್ಸಸ್ ಆಫ್ ದಿ ಮ್ಯಾಚ್' ನಂತಹ ಪ್ರಶಸ್ತಿಗಳನ್ನು ಹಲವು ಬಾರಿ ಗೆದ್ದು, ಪ್ರತಿ ಬಾರಿಯೂ ತಲಾ ಒಂದು ಲಕ್ಷ ರೂಪಾಯಿ ಗಳಿಸಿದ್ದಾನೆ. ಒಟ್ಟಿನಲ್ಲಿ, ತನ್ನ ವೃತ್ತಿಜೀವನದ ಮೊದಲ ಸಂಪೂರ್ಣ ಐಪಿಎಲ್ ಸೀಸನ್‌ನಲ್ಲೇ ವೈಭವ್, ಪ್ರದರ್ಶನದಲ್ಲಿ ಮಾತ್ರವಲ್ಲದೆ ಸಂಪಾದನೆಯಲ್ಲೂ ದೊಡ್ಡ ಮಟ್ಟದ ಸದ್ದು ಮಾಡಿದ್ದಾನೆ.

