ಆಫ್ಘಾನಿಸ್ತಾನ ಎ ವಿರುದ್ಧದ ತ್ರಿಕೋನ ಸರಣಿ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 22 ಎಸೆತಗಳಲ್ಲಿ 9 ಬೌಂಡರಿ ಸಹಿತ 44 ರನ್ ಸಿಡಿಸಿದ ಅವರು, ಕೇವಲ 6 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ವೈಭವ್, ಈ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು.

ದಂಬುಲ್ಲಾ: ಭಾರತ ಎ ಹಾಗೂ ಆಫ್ಘಾನಿಸ್ತಾನ ಎ ನಡುವಿನ ತ್ರಿಕೋನ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಎರಡನೇ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಬಗ್ಗೆ ಕುತೂಹಲವಿತ್ತು. ಇದೀಗ ಆಫ್ಘಾನಿಸ್ತಾನ ಎ ಎದುರಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತ 'ಎ' ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮೊದಲ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ಗೆ ಮೊರೆ ಹೋದರು. ಬೌಂಡರಿಗಳ ಸುರಿಮಳೆ ಹರಿಸಿದ ವೈಭವ್ ಸೂರ್ಯವಂಶಿ, ಕೆಲವೇ ರನ್‌ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದರು. ವೈಭವ್ ಸೂರ್ಯವಂಶಿಯ ಒಂದು ಕೆಟ್ಟ ಶಾಟ್ ಪೆವಿಲಿಯನ್‌ಗೆ ವಾಪಾಸ್ಸಾಗುವಂತೆ ಮಾಡಿತು.

ಆಫ್ಘಾನಿಸ್ತಾನ 'ಎ' ಎದುರು ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ವೈಭವ್ ಸೂರ್ಯವಂಶಿ:

ಆಫ್ಘಾನಿಸ್ತಾನ 'ಎ' ಎದುರಿನ ಪಂದ್ಯದಲ್ಲಿ ವೈಭವ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಆಕ್ರಮಣಕಾರಿ ಅಟವಾಡುವ ಮುನ್ಸೂಚನೆ ನೀಡಿದರು. ಐಪಿಎಲ್‌ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದ ವೈಭವ್, ಆಫ್ಘಾನ್ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಸೂರ್ಯವಂಶಿ ಕೇವಲ 22 ಎಸೆತಗಳನ್ನು ಎದುರಿಸಿ 200ರ ಸ್ಟ್ರೈಕ್‌ರೇಟ್‌ನಲ್ಲಿ 44 ರನ್ ಸಿಡಿಸಿದರು. ವೈಭವ್ ಅವರ ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 9 ಸೊಗಸಾದ ಬೌಂಡರಿಗಳಿದ್ದವು. ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ವೈಭವ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್‌ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಈ ಮೂಲಕ ಕೇವಲ ಆರು ರನ್ ಅಂತರದಲ್ಲಿ ವೈಭವ್ ಸೂರ್ಯವಂಶಿ ಅರ್ಧಶತಕ ವಂಚಿತರಾದರು.

ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ವೈಭವ್ ಸೂರ್ಯವಂಶಿ:

ತ್ರಿಕೋನ ಸರಣಿಯ ಭಾರತ 'ಎ' ತಾನಾಡಿದ ಮೊದಲ ಪಂದ್ಯದಲ್ಲಿ ಶ್ರೀಲಂಕಾ 'ಎ' ಎದುರಿನ ಪಂದ್ಯದಲ್ಲಿ ವಿರೋಚಿತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲಿ ಶ್ರೀಲಂಖಾ 'ಎ' ಎದುರು 14 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದ್ದರು.

ಬೃಹತ್ ಮೊತ್ತದತ್ತ ಭಾರತ 'ಎ' ದಾಪುಗಾಲು:

ಆಫ್ಘಾನಿಸ್ತಾನ 'ಎ' ಎದುರು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ 'ಎ' ತಂಡವು ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 74 ರನ್‌ಗಳ ಆರಂಭ ಪಡೆಯಿತು. ಸೂರ್ಯವಂಶಿ 44 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಪ್ರಭ್‌ಸಿಮ್ರನ್‌ ಸಿಂಗ್ 84 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಭಾರತ ತಂಡವು 25 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.