ಸಿಎಸ್‌ಕೆ ಸೋಲಿಸಲು ಬರ್ತ್‌ಡೇ ಕೇಕ್ ಕಟ್ಟಿಂಗ್ ತ್ಯಾಗ ಮಾಡಿದ ವೈಭವ್ ಸೂರ್ಯವಂಶಿ, 15 ರ ಪೋರ ಮೊದಲ ಪಂದ್ಯದಲ್ಲೇ ಅತೀವೇಗದ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದು ಮಾತ್ರವಲ್ಲ, ರಾಜಸ್ಥಾನಕ್ಕೆ ಭರ್ಜರಿ ಗೆಲುವು ನೀಡಿದ್ದಾರೆ. 

ಗುವ್ಹಾಟಿ (ಮಾ.31) ಐಪಿಎಲ್ 2026 ಟೂರ್ನಿಯ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿ ಶುಭಾರಂಭ ಮಾಡಿದೆ. ಸಿಎಸ್‌ಕೆ ತಂಡವನ್ನು 127 ರನ್‌ಗೆ ಕಟ್ಟಿ ಹಾಕಿದ ರಾಜಸ್ಥಾನ, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತ್ತು. ಪ್ರಮುಖವಾಗಿ ವೈಭವ್ ಸೂರ್ಯವಂಶಿ ಕೇವಲ 15 ಎಸೆತದಲ್ಲಿ ಹಾಫ್ ಸೆಂಚುರಿ ದಾಖಲೆ ಬರೆದಿದ್ದಾರೆ. 12 ಓವರ್‌ಗೆ ಪಂದ್ಯ ಮುಗಿಸಿ ಗೆಲುವಿನ ಸಂಭ್ರಮ ಆಚರಿಸಿತ್ತು. ಸಿಎಸ್‌ಕೆ ತಂಡ ಸೋಲಿಸಲು ಸತತ ತಯಾರಿ ಮಾಡಿದ್ದ ವೈಭವ್ ಸೂರ್ಯವಂಶಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವುದನ್ನು ತ್ಯಾಗ ಮಾಡಿದ್ದರು. ಈ ಕುರಿತು ಸ್ವತಃ ಸೂರ್ಯವಂಶಿ ಬಹಿರಂಗಪಡಿಸಿದ್ದಾರೆ.

ಕೇಕ್ ಕತ್ತರಿಸದೇ ಮಲಗಿದೆ ಸೂರ್ಯವಂಶಿ

ಸಿಎಸ್‌ಕೆ ವಿರುದ್ಧದ ಪಂದ್ಯ ಗೆದ್ದ ಬಳಿಕ ಮಾತನಾಡಿದ ವೈಭವ್ ಸೂರ್ಯವಂಶಿ ತಮ್ಮ ಬರ್ತ್‌ಡೇ ಸಂಭ್ರಮದ ಕುರಿತು ಮಾತನಾಡಿದ್ದಾರೆ. ಸಿಎಸ್‌ಕೆ ವಿರುದ್ದಧ ಪಂದ್ಯದ ತಯಾರಿಯಲ್ಲಿದ್ದೆವು. ಇದರ ನಡುವೆ ತಂಡದ ಸದಸ್ಯರು, ಸ್ಟಾಫ್ ನನ್ನ ಹುಟ್ಟುಹಬ್ಬ ಸಂಭ್ರಮ ಆಚರಿಸಲು ಮುಂದಾಗಿದ್ದರು.ಆದರೆ ನಾನು ಬೇಗ ಮಲಗಿದ್ದೆ. ಹೀಗಾಗಿ ಕೇಕ್ ಕತ್ತರಿಸಲಿಲ್ಲ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಎಲ್ಲರೂ ರೆಡಿಯಾಗಿದ್ದರು. ಕೇಕ್ ತರಿಸಲಾಗಿತ್ತು. ಆದರೆ ನಾನು ಅಭ್ಯಾಸ ಮುಗಿಸಿ ಬೇಗನೆ ಮಲಗಿದ್ದೆ. ಕೇಕ್ ಕತ್ತರಿಸಿ ಸಂಭ್ರಮ ಆಚರಿಸಲು ಎಲ್ಲಾ ತಯಾರಿಗಳು ನಡೆದಿತ್ತು ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ. ಕೇಕ್ ಮುಖಕ್ಕೆ ಬಳಿಯುವ ಎಲ್ಲಾ ಸಾಹಸ ಬೇಡ ಎಂದು ಬೇಗ ಮಲಗಿದ್ದೆ ಎಂದಿದ್ದಾರೆ. ಮಾರ್ಚ್ 27 ರಂದು ವೈಭವ್ ಸೂರ್ಯವಂಶಿ 15ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿರಿಯ ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಕೋಚ್ ಕುಮಾರ ಸಂಗಕ್ಕಾರ, ತಂಡದ ಹಿರಿಯ ಆಟಗಾರರು, ನಾಯಕ ಸೇರಿದಂತೆ ಎಲ್ಲರೂ ನನಗೆ ಬೆಂಬಲ ನೀಡಿದ್ದಾರೆ. ಯಾವುದೇ ಅಡೆ ತಡೆ ಇಲ್ಲದೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದ್ದಾರೆ. ಹೀಗಾಗಿ ನನ್ನ ಆಟವಾಡಲು ಸಾಧ್ಯವಾಗುತ್ತಿದೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 17 ಎಸೆತ ಎದುರಿಸಿ 52 ರನ್ ಸಿಡಿಸಿದ್ದರು. 4 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ್ದರು. ಹೀಗಾಗಿ ರಾಜಸ್ಥಾನ ರಾಯಸ್ಸ್ 12. 1 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತ್ತು.