ಐಪಿಎಲ್ ನಂತರ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಮುಲ್ಲಾನ್‌ಪುರದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಶುಭ್‌ಮನ್‌ ಗಿಲ್ ನಾಯಕತ್ವದ ತಂಡದಲ್ಲಿ ಆಟಗಾರರ ಆಯ್ಕೆ ಗೊಂದಲವಿದ್ದು, ಸುಧಾರಿತ ಪ್ರದರ್ಶನ ನೀಡುತ್ತಿರುವ ಅಫ್ಘಾನ್ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಈ ಪಂದ್ಯವು ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಆಗಿದೆ.

ಮುಲ್ಲಾನ್‌ಪುರ: 19ನೇ ಆವೃತ್ತಿಯ ಐಪಿಎಲ್‌ ಮುಗಿದು ವಾರದೊಳಗೆ ಭಾರತೀಯ ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಶನಿವಾರದಿಂದ ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯ ನಡೆಯಲಿದ್ದು, ಮುಲ್ಲಾನ್‌ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ-ಆಫ್ಘನ್‌ ಈವರೆಗೂ ಒಮ್ಮೆ ಮಾತ್ರ ಟೆಸ್ಟ್‌ನಲ್ಲಿ ಮುಖಾಮುಖಿಯಾಗಿವೆ. 2018ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 10 ವಿಕೆಟ್‌ನಿಂದ ಗೆಲುವು ಸಾಧಿಸಿತ್ತು. ಆದರೆ ಈಗ ಆಫ್ಘನ್‌ ತಂಡದಲ್ಲಿ ಸುಧಾರಣೆಯಾಗಿತ್ತು, ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಭಾರತಕ್ಕೆ ಗೆಲುವು ಸುಲಭವೇನಿಲ್ಲ. ಅಲ್ಲದೆ, ಕಳೆದ ವರ್ಷ ತವರಿನಲ್ಲೇ ಭಾರತ ತಂಡ ದ.ಆಫ್ರಿಕಾ ವಿರುದ್ಧ 0-2 ಅಂತರದಲ್ಲಿ ಸೋತಿದ್ದು, ಹೀಗಾಗಿ ಅಫ್ಘಾನಿಸ್ತಾನವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ.

ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡದಲ್ಲಿ 3ನೇ ಕ್ರಮಾಂಕದ ಗೊಂದಲ ಇನ್ನೂ ಮುಗಿದಿಲ್ಲ. ಈ ಸ್ಥಾನಕ್ಕೆ ದೇವದತ್‌ ಪಡಿಕ್ಕಲ್‌ ಮತ್ತು ಸಾಯಿ ಸುದರ್ಶನ್‌ ನಡುವೆ ಪೈಪೋಟಿಯಿದೆ. ಆದರೆ ಆಫ್ಘನ್‌ ವಿರುದ್ಧ ಪಂದ್ಯದಲ್ಲಿ ಸುದರ್ಶನ್‌ರನ್ನು ಆಡಿಸಲಾಗುವುದು ಎಂದು ಕೋಚ್‌ ಗಂಭೀರ್‌ ತಿಳಿಸಿದ್ದಾರೆ.

ಇನ್ನು, ರವೀಂದ್ರ ಜಡೇಜಾರ ಉತ್ತರಾಧಿಕಾರಿಯ ಹುಡುಕಾಟದಲ್ಲಿರುವ ಭಾರತ ತಂಡ, ಮಾನವ್‌ ಸುತಾರ್ ಅಥವಾ ಹರ್ಷ್‌ ದುಬೆ ಪೈಕಿ ಯಾರನ್ನು ಆಡಿಸಲಿದೆ ಎಂಬ ಕುತೂಹಲವಿದೆ. ಕೋಚ್‌ ಗಂಭೀರ್‌ ಹೇಳಿರುವಂತೆ ತಂಡ ಈ ಪಂದ್ಯದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆಯೂ ಇದೆ. ಹೀಗಾದರೆ ಕುಲ್ದೀಪ್‌ ಯಾದವ್‌ ಜೊತೆಗೆ ವಾಷಿಂಗ್ಟನ್‌ ಸುಂದರ್‌ಗೆ ಸ್ಥಾನ ಸಿಗಬಹುದು. ಉಳಿದಂತೆ ತಂಡದಲ್ಲಿ ಕೆ.ಎಲ್‌.ರಾಹುಲ್‌, ಯಶಸ್ವಿ ಜೈಸ್ವಾಲ್‌, ಸಿರಾಜ್‌, ಪ್ರಸಿದ್ಧ್ ಕೃಷ್ಣ, ರಿಷಭ್‌ ಪಂತ್‌ ಇದ್ದಾರೆ.

ಮತ್ತೊಂದೆಡೆ ಆಫ್ಘನ್‌ ತಂಡವನ್ನು ಹಶ್ಮತುಲ್ಲಾ ಶಾಹಿದಿ ಮುನ್ನಡೆಸಲಿದ್ದಾರೆ. ತಾರಾ ಆಟಗಾರ ರಶೀದ್‌ ಖಾನ್‌ ಈ ಪಂದ್ಯಕ್ಕೆ ಲಭ್ಯರಿಲ್ಲ. ಅನುಭವಿ ಹಾಗೂ ಯುವ ಕ್ರಿಕೆಟಿಗರನ್ನೊಳಗೊಂಡ ತಂಡ ಸುಧಾರಿತ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಕಾಡುವ ವಿಶ್ವಾಸದಲ್ಲಿದೆ. ರಹ್ಮಾನುಲ್ಲಾ ಗುರ್ಬಜ್‌, ರಹ್ಮತ್ ಶಾ, ಅಜ್ಮತುಲ್ಲಾ ಓಮರ್‌ಜೈ ಸೇರಿದಂತೆ ಹಲವು ಅನುಭವಿಗಳು ತಂಡದಲ್ಲಿದ್ದಾರೆ.

--

ಮುಖಾಮುಖಿ: 01

ಭಾರತ: 01

ಅಫ್ಘಾನಿಸ್ತಾನ: 00

ಸಂಭಾವ್ಯ ಆಟಗಾರರು:

ಭಾರತ: ಜೈಸ್ವಾಲ್‌, ಕೆ.ಎಲ್.ರಾಹುಲ್‌, ಸುದರ್ಶನ್‌, ಶುಭ್‌ಮನ್‌(ನಾಯಕ), ರಿಷಭ್‌ ಪಂತ್‌, ಧ್ರುವ್‌ ಜುರೆಲ್‌, ವಾಷಿಂಗ್ಟನ್‌, ಹರ್ಷ್‌ ದುಬೆ/ಮಾನವ್‌, ಕುಲ್ದೀಪ್‌, ಸಿರಾಜ್‌, ಪ್ರಸಿದ್ಧ್‌ ಕೃಷ್ಣ.

ಅಫ್ಘಾನಿಸ್ತಾನ: ಸೆದಿಕುಲ್ಲಾ ಅತಲ್‌, ಗುರ್ಬಾಜ್‌, ರಹ್ಮತ್‌ ಶಾ, ಹಶ್ಮತುಲ್ಲಾ(ನಾಯಕ), ಅಜ್ಮತುಲ್ಲಾ, ರಹ್ಮಾನುಲ್ಲಾ, ಅಫ್ಸರ್‌, ಶರಫುದ್ದೀನ್‌, ನನ್ಗೆಯಲಿಯಾ, ಖೈಸ್‌, ಜಿಯಾವುರ್ರಹ್ಮಾನ್‌.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ದೇಶದ 31ನೇ ಕ್ರೀಡಾಂಗಣ

ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಟೆಸ್ಟ್‌ ಪಂದ್ಯ ನಡೆಯಲಿದೆ. ಇದು ಭಾರತದಲ್ಲಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸಿದ 31ನೇ ಕ್ರೀಡಾಂಗಣ ಎನಿಸಿಕೊಳ್ಳಲಿದೆ. ಮುಂಬೈನ ಜಿಮ್‌ಖಾನ ಕ್ರೀಡಾಂಗಣ ಭಾರತದಲ್ಲಿ ಟೆಸ್ಟ್‌ಗೆ ಆತಿಥ್ಯ ವಹಿಸಿದ ಮೊದಲ ಕ್ರೀಡಾಂಗಣ. 1933ರಲ್ಲಿ ಭಾರತ-ಇಂಗ್ಲೆಂಡ್‌ ನಡುವೆ ಪಂದ್ಯ ನಡೆದಿತ್ತು. ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯ ನಡೆದ ಕ್ರೀಡಾಂಗಣ ಕೋಲ್ಕತಾದ ಈಡನ್‌ ಗಾರ್ಡನ್ಸ್‌. ಅಲ್ಲಿ 43 ಪಂದ್ಯಗಳು ನಡೆದಿವೆ.