ಟೀಂ ಇಂಡಿಯಾದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ನೀಡದಿರುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಂತಹ ಸೀನಿಯರ್ ಆಟಗಾರರನ್ನು ಕೈಬಿಡುವುದು ಕಷ್ಟ ಹಾಗೂ ತಂಡದಲ್ಲಿ ಸ್ಥಿರತೆ ಕಾಪಾಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಟೀಂ ಇಂಡಿಯಾದ ಓಪನಿಂಗ್ ಜೋಡಿಯಾಗಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಸದ್ಯಕ್ಕೆ ಅವಕಾಶಗಳು ಕಡಿಮೆ. ಈ ಬಗ್ಗೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ವೈಭವ್ ಉತ್ತಮ ಫಾರ್ಮ್‌ನಲ್ಲಿದ್ದರೂ ತಂಡದಲ್ಲಿ ಯಾಕೆ ಸ್ಥಾನ ನೀಡಿಲ್ಲ ಎಂಬ ಬಗ್ಗೆ ಗಂಭೀರ್ ನೇರವಾಗಿ ಆತನ ಬಳಿಯೇ ಮಾತನಾಡಿದ್ದಾರಂತೆ.
ವೈಭವ್ ಸೂರ್ಯವಂಶಿ ಬಗ್ಗೆ ಗಂಭೀರ್ ಹೇಳಿದ್ದೇನು?
"ನನಗೂ ಇದೊಂದು ಹೊಸ ಅನುಭವ. ಆತ ಉತ್ತಮ ಫಾರ್ಮ್‌ನಲ್ಲಿದ್ದಾನೆ ಅನ್ನೋದು ನಿಜ. ಆದರೆ ತಂಡದ ಸೀನಿಯರ್ ಆಟಗಾರರು ಬಹಳ ದಿನಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಅವಕಾಶಕ್ಕಾಗಿ ಕಾಯಲೇಬೇಕು ಎಂದು ನಾನು ಅವನಿಗೆ ಅರ್ಥ ಮಾಡಿಸಿದೆ. ಇನ್ನೊಂದು ವಿಚಾರ ಅಂದರೆ, ಸೋಶಿಯಲ್ ಮೀಡಿಯಾ ಅಥವಾ ಹೊರಗಿನ ಕೂಗು ನೋಡಿ ನಾವು ಪ್ಲೇಯಿಂಗ್ ಇಲೆವೆನ್ ನಿರ್ಧರಿಸುವುದಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಕೋಚ್ ಮತ್ತು ಕ್ಯಾಪ್ಟನ್ ಯಾರಿಂದ ಗೆಲುವು ಸಾಧ್ಯ ಎಂದು ನಂಬುತ್ತಾರೋ, ಅವರನ್ನೇ ಆಯ್ಕೆ ಮಾಡುತ್ತಾರೆ" ಎಂದು ಗಂಭೀರ್ ಹೇಳಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಓಪನಿಂಗ್ ಮಾಡಲು ಒಂದೇ ಒಂದು ಅವಕಾಶ ಸಿಕ್ಕಿರಲಿಲ್ಲ. ಒಂದು ವೇಳೆ ವೈಭವ್‌ಗೆ ದಿಢೀರ್ ಅವಕಾಶ ನೀಡಿದರೆ, ಅದು ಬೆಂಚ್ ಕಾಯುತ್ತಿರುವ ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್‌ಗೆ ಮಾಡುವ ಅನ್ಯಾಯವಾಗುತ್ತದೆ ಎಂದು ಗಂಭೀರ್ ವಿವರಿಸಿದ್ದಾರೆ.
"ಇಂದು ವೈಭವ್ ಆಡಿದರೆ, ಅಭಿಷೇಕ್ ಅಥವಾ ಸಂಜು ಇಬ್ಬರಲ್ಲಿ ಯಾರನ್ನಾದರೂ ಕೈಬಿಡಬೇಕಾಗುತ್ತದೆ. ಆಗ ಅವರ ಬಳಿ ಮಾತನಾಡುವುದು ಕಷ್ಟ. ಕಳೆದ ಒಂದೂವರೆ-ಎರಡು ವರ್ಷಗಳಿಂದ ಉತ್ತಮ ಇಂಪ್ಯಾಕ್ಟ್ ಮಾಡಿರುವ ಕಾಂಬಿನೇಷನ್ ಅನ್ನು ಕೇವಲ ಮೂರ್ನಾಲ್ಕು ಮ್ಯಾಚ್‌ಗಳ ವೈಫಲ್ಯದ ಕಾರಣಕ್ಕೆ ಕಡೆಗಣಿಸಲು ಸಾಧ್ಯವಿಲ್ಲ. ಪ್ರತಿಭಾವಂತ ಹೊಸ ಆಟಗಾರನಿಗೆ ಮಣೆ ಹಾಕಲು ಹೋಗಿ ಹಳಬರನ್ನು ಕೈಬಿಡಲಾಗದು. ಡ್ರೆಸ್ಸಿಂಗ್ ರೂಮ್‌ನಲ್ಲಿ ಆ ಭದ್ರತೆ ಒದಗಿಸಲು ಕೆಲವೊಮ್ಮೆ ಕಾಯುವುದು ಅನಿವಾರ್ಯ" ಎಂದು ಅವರು ತಿಳಿಸಿದ್ದಾರೆ.
ಜನಪ್ರಿಯ ನಿರ್ಧಾರ ತೆಗೆದುಕೊಳ್ಳುವುದು ಸುಲಭ:
ತಂಡದ ಆಯ್ಕೆ ವಿಚಾರದಲ್ಲಿ ಮಾಜಿ ಆಟಗಾರರು ಮತ್ತು ಅಭಿಮಾನಿಗಳಿಂದ ಗಂಭೀರ್ ಸಾಕಷ್ಟು ಟೀಕೆ ಎದುರಿಸಿದ್ದಾರೆ. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ ಎಂದು ಅವರು ಹೇಳಿದ್ದಾರೆ. "ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನಗೆ ತುಂಬಾ ಸುಲಭ. ಆದರೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಕಷ್ಟದ ಕೆಲಸ. ಸಂಜು ಮತ್ತು ಅಭಿಷೇಕ್ ಅವರನ್ನು ಉಳಿಸಿಕೊಳ್ಳುವ ಸರಿಯಾದ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಒಂದು ವಿಶ್ವಕಪ್‌ನಿಂದ ಮುಂದಿನ ವಿಶ್ವಕಪ್‌ವರೆಗೆ ಸೋಲನ್ನೇ ಕಾಣದೆ ಮುನ್ನುಗ್ಗಿದ ಯಾವುದೇ ತಂಡ ಇತಿಹಾಸದಲ್ಲಿಲ್ಲ. ಯಾವುದೋ ಒಂದು ಸರಣಿ ಅಥವಾ ಮೂರು ಪಂದ್ಯಗಳಲ್ಲಿನ ಕಳಪೆ ಪ್ರದರ್ಶನ ಒಬ್ಬ ಆಟಗಾರನನ್ನು ಅಥವಾ ತಂಡವನ್ನು ಕೆಟ್ಟದಾಗಿಸುವುದಿಲ್ಲ. ಹೀಗಾಗಿ ತಂಡದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ" ಎಂದು ಹೆಡ್ ಕೋಚ್ ಸ್ಪಷ್ಟಪಡಿಸಿದ್ದಾರೆ.


