15 ವರ್ಷದ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ವೈಭವ್ ಹಾಗೂ ಮತ್ತೋರ್ವ ಆರಂಭಿಕ ಅಭಿಷೇಕ್ ಶರ್ಮಾಗೆ ಪರಿಸ್ಥಿತಿಗೆ ತಕ್ಕಂತೆ ಆಡುವಂತೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಈ ನಡುವೆ, ವೈಭವ್‌ಗಾಗಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದನ್ನು ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ.

ಬ್ರಿಸ್ಟೊಲ್: 15 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಭಾರತ ಕ್ರಿಕೆಟ್ ತಂಡ ಕಂಡ ಸ್ಪೋಟಕ ಆರಂಭಿಕ ಜೋಡಿ ಎಂದು ಗುರುತಿಸಿಕೊಂಡಿದೆ. ಆದರೆ ಕಳೆದ ಮೂರು ಪಂದ್ಯಗಳಿಂದ ಟೀಂ ಇಂಡಿಯಾ ಪರ ಕಣಕ್ಕಿಳಿದಿರುವ ವೈಭವ್ ಸೂರ್ಯವಂಶಿ ತಮ್ಮ ಮೇಲಿಟ್ಟ ನಿರೀಕ್ಷೆ ಉಳಿಸಿಕೊಳ್ಳಲು ಪದೇ ಪದೇ ಎಡವುತ್ತಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ವೈಭವ್ ಸೂರ್ಯವಂಶಿ ಕ್ರಮವಾಗಿ 14,13 ಹಾಗೂ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೀಗಿದ್ದೂ ತಮ್ಮ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ವೃತ್ತಿಜೀವನದಲ್ಲಿ ವೈಭವ್ ಸೂರ್ಯವಂಶಿ ಈಗಾಗಲೇ 5 ಸಿಕ್ಸರ್ ಚಚ್ಚಿದ್ದಾರೆ. ಮೂರು ಇನ್ನಿಂಗ್ಸ್‌ಗಳಿಂದ ಬಿಹಾರ ಮೂಲದ ಆಟಗಾರ ಕೇವಲ 42 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, 2026ರ ಐಪಿಎಲ್ ಟೂರ್ನಿಯಲ್ಲಿ 776 ರನ್ ಸಿಡಿಸುವ ಮೂಲಕ, ಆರೆಂಜ್ ಕ್ಯಾಪ್ ಗೆದ್ದ ಅತಿಕಿರಿಯ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದರು.

ಇದರ ಬೆನ್ನಲ್ಲೇ ಬಿಸಿಸಿಐ, ವೈಭವ್ ಸೂರ್ಯವಂಶಿಯನ್ನು ಟೀಂ ಇಂಡಿಯಾಗೆ ಸೆಲೆಕ್ಟ್ ಮಾಡುವ ಮೂಲಕ ದೊಡ್ಡ ನಿರ್ಧಾರವನ್ನು ಕೈಗೊಂಡಿತು. ಆದರೆ ಐಪಿಎಲ್‌ನಲ್ಲಿ ಸಿಕ್ಕಂತಹ ಯಶಸ್ಸನ್ನು ವೈಭವ್ ಸೂರ್ಯವಂಶಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುನರಾವರ್ತಿಸಲು ವಿಫಲವಾಗಿದ್ದಾರೆ. ಇದೀಗ ವೈಭವ್ ಸೂರ್ಯವಂಶಿ ಮಾತ್ರವಲ್ಲದೇ ಟೀಂ ಇಂಡಿಯಾ ಮತ್ತೋರ್ವ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾಗೆ ಬಿಸಿಸಿಐ ಖಡಕ್ ವಾರ್ನಿಂಗ್ ರವಾನಿಸಿದೆ ಎಂದು ವರದಿಯಾಗಿದೆ.

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾಗೆ ಬಿಸಿಸಿಐ ಖಡಕ್ ವಾರ್ನಿಂಗ್!

ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ಎದುರಿನ ನಾಲ್ಕನೇ ಟಿ20 ಪಂದ್ಯವನ್ನು ಸೋಲುವುದರೊಂದಿಗೆ ಭಾರತ ತಂಡವು ಇದೇ ಮೊದಲ ಸಲ ಟಿ20 ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿಗೆ ಸರಣಿ ಸೋಲಿನ ಮುಖಭಂಗ ಅನುಭವಿಸಿದೆ. ಇದೀಗ ಎಎನ್‌ಐ ನ್ಯೂಸ್ ಏಜನ್ಸಿ ವರದಿಯ ಪ್ರಕಾರ, 'ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿಯ ಸಿಕ್ಸರ್ ಬಾರಿಗೆ ಕೌಶಲ್ಯ ಅದ್ಭುತವಾಗಿದೆ, ಆದರೆ ನೀವು ಪರಿಸ್ಥಿತಿಗೆ ತಕ್ಕಂತೆ ಆಡಿ ಎನ್ನುವ ಖಡಕ್ ವಾರ್ನಿಂಗ್ ಈ ಇಬ್ಬರಿಗೂ ಸಿಕ್ಕಿದೆ' ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಿರಿಯ ಕ್ರಿಕೆಟರ್ ಸೂರ್ಯವಂಶಿ:

ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆಗ ವೈಭವ್ ವಯಸ್ಸು ಕೇವಲ 15 ವರ್ಷ 99 ದಿನಗಳಾಗಿದ್ದವು. ಈ ಮೂಲಕ ಸಚಿನ್ ದಾಖಲೆ ಮುರಿದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಅತ್ಯಂತ ಕಿರಿಯ ಪುರುಷ ಕ್ರಿಕೆಟಿಗ ಎನ್ನುವ ದಾಖಲೆಗೆ ವೈಭವ್ ಪಾತ್ರರಾಗಿದ್ದರು. ಅಂದಹಾಗೆ 1989ರಲ್ಲಿ ಸಚಿನ್ ತೆಂಡೂಲ್ಕರ್ ಪಾಕಿಸ್ತಾನ ವಿರುದ್ದ ಕರಾಚಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವಾಗ ಲಿಟಲ್ ಮಾಸ್ಟರ್ ವಯಸ್ಸು 16 ವರ್ಷ 205 ದಿನಗಳಾಗಿದ್ದವು.

ಸಂಜು ಸ್ಯಾಮ್ಸನ್ ಹೊರಗಿಟ್ಟಿದ್ದನ್ನು ಖಂಡಿಸಿದ ಪಾರ್ಥಿವ್ ಪಟೇಲ್:

ಅಂತರರಾಷ್ಟ್ರೀಯ ಟಿ20 ತಂಡಕ್ಕೆ ವೈಭವ್ ಸೂರ್ಯವಂಶಿ ಅವರನ್ನು ಸೇರಿಸಿಕೊಳ್ಳಲು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ನಿರ್ಧಾರವನ್ನೂ ಭಾರತದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ. 'ಯಾವಾಗಲೂ ಸಂಜು ಸ್ಯಾಮ್ಸನ್ ಅವರೇ ಏಕೆ ಅವಕಾಶ ಕಳೆದುಕೊಳ್ಳುತ್ತಾರೆ? ಕಳೆದ 11-12 ವರ್ಷಗಳ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನವನ್ನು ಗಮನಿಸಿದರೆ, ಅವರನ್ನು ಸದಾ ಕಾಡುವ ಒಂದು ಪ್ರಶ್ನೆಯೆಂದರೆ ಅದು 'ಸ್ಥಿರತೆ'. ಕಳೆದ 12 ವರ್ಷಗಳಲ್ಲಿ, ಅವರು 500ಕ್ಕೂ ಹೆಚ್ಚು ರನ್ ಗಳಿಸಿದ್ದು ಕೇವಲ ಒಂದೇ ಒಂದು ಐಪಿಎಲ್ (IPL) ಸೀಸನ್‌ನಲ್ಲಿ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಅವರ ಪ್ರದರ್ಶನ ಏರಿಳಿತಗಳಿಂದ ಕೂಡಿದೆ. ಹೀಗಾಗಿ, ತಂಡದ ಆಯ್ಕೆಯ ವಿಷಯ ಬಂದಾಗ ಆ ಅಂಶವು ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ.

ವೇಗವಾಗಿ ರನ್ ಗಳಿಸಲು ವಿಫಲರಾಗುವ ಆಟಗಾರ ಅಥವಾ ಸ್ಥಿರವಾದ ಪ್ರದರ್ಶನ ನೀಡದ ಆಟಗಾರ - ಇವರಲ್ಲಿ ಒಬ್ಬರನ್ನು ತಂಡದಿಂದ ಕೈಬಿಡಲಾಗುತ್ತದೆ. ಭಾವನೆ ಮತ್ತು ತರ್ಕ - ಎರಡನ್ನೂ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಹೇಳುವುದಾದರೆ, ಹೌದು, ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದು ಸರಿಯಾದ ನಿರ್ಧಾರವೇ ಆಗಿತ್ತು. ಆದರೆ ಕೇವಲ ತಾರ್ಕಿಕವಾಗಿ ಯೋಚಿಸುವುದಾದರೆ, ಸಂಜು ಸ್ಯಾಮ್ಸನ್ ಅವರನ್ನು ಏಕೆ ಕೈಬಿಡಲಾಗಿದೆ? ಹಾಗಾಗಿ, ಈ ನಿರ್ಧಾರವನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳಲಾಗಿದೆ ಎಂದೇ ನನಗೆ ಅನ್ನಿಸುತ್ತದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.

ತಮ್ಮ ಇಲ್ಲಿಯವರೆಗಿನ ಐಪಿಎಲ್ ವೃತ್ತಿಜೀವನದಲ್ಲಿ, ಸೂರ್ಯವಂಶಿ 23 ಪಂದ್ಯಗಳನ್ನಾಡಿ 44.69ರ ಸರಾಸರಿ ಹಾಗೂ 228.95ರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 1,028 ರನ್‌ಗಳನ್ನು ಗಳಿಸಿದ್ದಾರೆ; ಇದರಲ್ಲಿ ಎರಡು ಶತಕಗಳು, ಆರು ಅರ್ಧಶತಕಗಳು ಸೇರಿವೆ. 103 ರನ್‌ಗಳು ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಮೊತ್ತ ಎನಿಸಿಕೊಂಡಿದೆ. ಅಂದಹಾಗೆ ವೈಭವ್ ಐಪಿಎಲ್‌ನಲ್ಲಿ ಈಗಾಗಲೇ 96 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ವಿಶ್ವದ ನಂ. 2 T20I ಬ್ಯಾಟರ್ ಅಭಿಷೇಕ್ ಶರ್ಮಾ ಇಂಗ್ಲೆಂಡ್ ವಿರುದ್ಧ ತುಸು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ತಿಂಗಳು ಐರ್ಲೆಂಡ್ ವಿರುದ್ಧ 49 ಮತ್ತು 0 ರನ್ ಗಳಿಸಿದ ನಂತರ, ಸನ್‌ರೈಸರ್ಸ್ ಹೈದರಾಬಾದ್‌ನ ಈ ಆರಂಭಿಕ ಆಟಗಾರ ಮೊದಲ ಎರಡು T20I ಪಂದ್ಯಗಳಲ್ಲಿ 59 ಮತ್ತು 43 ರನ್ ಗಳಿಸುವಲ್ಲಿ ಯಶಸ್ವಿಯಾದರು; ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ 10 ಮತ್ತು 16 ರನ್ ಗಳಿಸಲಷ್ಟೇ ಶಕ್ತರಾದರು.