‘ಸ್ಪಿನ್‌ ಪಿಚ್‌ನಲ್ಲಿ ರಾಹುಲ್‌ ರನ್‌ ಗಳಿಸಲು ಕಲಿಯಲಿ’ಈಗಾಗಲೇ ರಾಹುಲ್ ತಮ್ಮ ಸಾಮರ್ಥ್ಯವೇನು ಎನ್ನುವುದನ್ನು ಸಾಬೀತುಪಡಿಸಿದ್ದಾರೆಕೆ ಎಲ್ ರಾಹುಲ್ ಪರ ಬ್ಯಾಟ್ ಬೀಸಿದ ನಾಯಕ ರೋಹಿತ್ ಶರ್ಮಾ

ನವ​ದೆ​ಹ​ಲಿ(ಫೆ.20): ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಬ್ಯಾಟರ್‌ ಕೆ ಎಲ್ ರಾಹುಲ್ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇದರ ಜತೆಗೆ ರಾಹುಲ್ ಪರ ಹಿಟ್‌ಮ್ಯಾನ್ ಬ್ಯಾಟ್ ಬೀಸಿದ್ದಾರೆ.

"ಕೆ.ಎ​ಲ್‌.​ರಾ​ಹುಲ್‌ರಲ್ಲಿ ಸಾಮ​ರ್ಥ್ಯ​ವಿದೆ. ಅದನ್ನು ಈಗಾ​ಗಲೇ ಇಂಗ್ಲೆಂಡ್‌, ದಕ್ಷಿಣ ಆ​ಫ್ರಿ​ಕಾದ ಪಿಚ್‌​ಗ​ಳಲ್ಲಿ ಸಾಬೀ​ತು​ಪ​ಡಿ​ಸಿ​ದ್ದಾರೆ. ಆದರೆ ಸ್ಪಿನ್‌ ಪಿಚ್‌ಗಳಲ್ಲಿ ರನ್‌ ಗಳಿಸುವುದನ್ನು ರಾಹುಲ್‌ ಕಲಿಯಬೇಕು ಎಂದು ನಾಯಕ ರೋಹಿತ್‌ ಶರ್ಮಾ ಸಲಹೆ ನೀಡಿ​ದ್ದಾರೆ. ‘ತಂಡದ ಒಟ್ಟು ಪ್ರದರ್ಶನದ ಕಡೆಗೆ ನಾವು ಹೆಚ್ಚು ಗಮನ ನೀಡುತ್ತೇವೆ. ವೈಯಕ್ತಿಕ ಪ್ರದರ್ಶನಗಳ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ" ಎಂದು ರೋಹಿತ್‌ ಹೇಳಿದ್ದಾರೆ.

ರಾಹುಲ್‌ ಕೌಂಟಿ ಆಡಲಿ: ಇದೇ ವೇಳೆ ರಾಹುಲ್‌ರ ಆಟದ ಕುರಿತು ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಟೀಕೆ ಮುಂದುವರಿಸಿದ್ದಾರೆ. ಕಳಪೆಯಾಟದ ಹೊರತಾಗಿಯೂ ಅವರನ್ನು ಆಯ್ಕೆ ಮಾಡುತ್ತಿರುವುದನ್ನು ಪ್ರಸಾದ್‌ ಟೀಕಿಸಿದ್ದಾರೆ. ‘ರಾಹುಲ್‌ ಲಯಕ್ಕೆ ಮರಳಬೇಕಿದ್ದರೆ ದೇಸಿ ಕ್ರಿಕೆಟಲ್ಲಿ ಆಡಬೇಕು. ಭಾರತೀಯ ದೇಸಿ ಋುತು ಮುಗಿದಿದೆ. ಇಂಗ್ಲೆಂಡ್‌ನ ಕೌಂಟಿಯಲ್ಲಿ ಹೋಗಿ ಆಡಬಹುದು. ಆದರೆ ಅದಕ್ಕಾಗಿ ಐಪಿಎಲ್‌ ಬಿಡಲು ಸಿದ್ಧರಿದ್ದಾರಾ’ ಎಂದು ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಕೊನೇ 2 ಟೆಸ್ಟ್‌, ಏಕದಿನ ಸರಣಿಗೆ ಭಾರತ ತಂಡ ಪ್ರಕಟ, ರಾಹುಲ್‌ಗೆ ಶಾಕ್‌!

ಆಸ್ಟ್ರೇಲಿಯಾ ಎದುರು ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್, 71 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಿತ 20 ರನ್ ಬಾರಿಸಿ ಟೋಡ್ ಮರ್ಫಿಗೆ ವಿಕೆಟ್‌ ಒಪ್ಪಿಸಿದ್ದರು. ಇನ್ನು ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೆ ಎಲ್ ರಾಹುಲ್‌ 41 ಎಸೆತಗಳನ್ನು ಎದುರಿಸಿ 17 ರನ್ ಬಾರಿಸಿ ನೇಥನ್ ಲಯನ್ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲೂ ಕೆ ಎಲ್ ರಾಹುಲ್ ದಯನೀಯ ಬ್ಯಾಟಿಂಗ್ ವೈಫಲ್ಯ ಮುಂದುವರೆದಿದ್ದು, ಕೇವಲ ಒಂದು ರನ್‌ ಬಾರಿಸಿ ನೇಥನ್ ಲಯನ್‌ಗೆ ವಿಕೆಟ್‌ ಒಪ್ಪಿಸಿದರು.

ಡೆಲ್ಲಿ ಟೆಸ್ಟ್ ಗೆದ್ದು ಬೀಗಿದ ಟೀಂ ಇಂಡಿಯಾ

ರವೀಂದ್ರ ಜಡೇಜಾ, ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ(42ಕ್ಕೆ7)ದ ಮೂಲಕ 2ನೇ ಟೆಸ್ಟ್‌ನಲ್ಲಿ ಭಾರತ 6 ವಿಕೆಟ್‌ ಜಯ ಸಾಧಿಸಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಂತೆ ಮಾಡಿದರು. ಸತತ 4ನೇ ಸರಣಿಯಲ್ಲಿ ಟ್ರೋಫಿ ಟೀಂ ಇಂಡಿಯಾದ ಪಾಲಾಗಿದ್ದು, 4 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿರುವ ತಂಡ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ.

ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಭಾರತ ಪ್ರವೇಶ ಖಚಿತ?

2ನೇ ಟೆಸ್ಟ್‌ ಗೆಲ್ಲುವ ಮೂಲಕ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಭಾರತ ಪ್ರವೇಶಿಸುವುದು ಬಹುತೇಕ ಖಚಿತವೆನಿಸಿದೆ. ಆಸೀಸ್‌ ವಿರುದ್ಧ ಬಾಕಿ ಇರುವ 2 ಟೆಸ್ಟ್‌ಗಳಲ್ಲಿ ಒಂದರಲ್ಲಿ ಗೆದ್ದರೆ ಸಾಕು ತಂಡ ಫೈನಲ್‌ಗೇರಲಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ಕೊನೆ 2 ಪಂದ್ಯಗಳಲ್ಲಿ ಸೋತರೂ ಫೈನಲ್‌ಗೇರಬಹುದು. ನ್ಯೂಜಿಲೆಂಡ್‌ನಲ್ಲಿ ಶ್ರೀಲಂಕಾ 2 ಪಂದ್ಯಗಳ ಸರಣಿಯಲ್ಲಿ 2-0ಯಲ್ಲಿ ಗೆದ್ದರಷ್ಟೇ ಆಸೀಸ್‌ ಫೈನಲ್‌ ರೇಸಿಂದ ಹೊರಬೀಳಲಿದೆ.

ಲಯನ್‌ ವಿರುದ್ಧ 532 ರನ್‌: ಪೂಜಾರ ಹೊಸ ದಾಖಲೆ!

ಟೆಸ್ಟ್‌ ಕ್ರಿಕೆಟಲ್ಲಿ ಒಬ್ಬ ಬೌಲರ್‌ ಎದುರು ಅತಿಹೆಚ್ಚು ರನ್‌ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಚೇತೇಶ್ವರ್‌ ಪೂಜಾರ ಮೊದಲ ಸ್ಥಾನಕ್ಕೇರಿದ್ದಾರೆ. ಆಸೀಸ್‌ ಸ್ಪಿನ್ನರ್‌ ನೇಥನ್‌ ಲಯನ್‌ ವಿರುದ್ಧ ಪೂಜಾರ 532 ರನ್‌ ಕಲೆಹಾಕಿದ್ದು, ಲಂಕಾದ ಕುಮಾರ್‌ ಸಂಗಕ್ಕರ ದಾಖಲೆ ಮುರಿದಿದ್ದಾರೆ. ಸಂಗಕ್ಕರ ಪಾಕಿಸ್ತಾನದ ಸಯೀದ್‌ ಅಜ್ಮಲ್‌ ವಿರುದ್ಧ 531 ರನ್‌ ಗಳಿಸಿದ್ದರು. ಸ್ಟೀವ್‌ ಸ್ಮಿತ್‌ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ ವಿರುದ್ಧ 520, ಇಂಗ್ಲೆಂಡ್‌ನ ಗ್ರಹಮ್‌ ಗೂಚ್‌ ಭಾರತದ ಕಪಿಲ್‌ ದೇವ್‌ ವಿರುದ್ಧ 517 ರನ್‌ ಗಳಿಸಿದ್ದಾರೆ.

100ನೇ ಜಯ: ಆಸ್ಪ್ರೇಲಿಯಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟಲ್ಲಿ ಭಾರತಕ್ಕಿದು 100ನೇ ಜಯ. 104 ಟೆಸ್ಟ್‌ಗಳಲ್ಲಿ 32, 143 ಏಕದಿನದಲ್ಲಿ 53, 26 ಟಿ20 ಪಂದ್ಯಗಳಲ್ಲಿ ಭಾರತ 10 ಜಯ ಸಾಧಿಸಿದೆ.