ಬ್ಲೂಮ್‌ಫಾಂಟೈನ್‌(ಜ.22): ಐಸಿಸಿ ಅಂಡರ್‌-19 ವಿಶ್ವಕಪ್‌ನಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ಕ್ರಿಕೆಟ್‌ ಶಿಶು ಜಪಾನ್‌ ವಿರುದ್ಧ ಮಂಗಳವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 10 ವಿಕೆಟ್‌ಗಳ ಜಯ ಸಾಧಿಸಿದ ಭಾರತ, ಅಂಡರ್‌-19 ಕ್ರಿಕೆಟ್‌ನಲ್ಲಿ ತನ್ನ ಅತಿದೊಡ್ಡ ಗೆಲುವಿನ ದಾಖಲೆಯನ್ನು ಬರೆಯಿತು.

ಇದನ್ನೂ ಓದಿ: ಅಂಡರ್ 19 ವಿಶ್ವಕಪ್: ಅಕ್ತರ್ ವೇಗದ ದಾಖಲೆ ಮುರಿದ ಜ್ಯೂ.ಮಲಿಂಗಾ ಮತೀಶಾ!.

ಟಾಸ್‌ ಗೆದ್ದರೂ ಜಪಾನ್‌ಗೆ ಮೊದಲು ಬ್ಯಾಟ್‌ ಮಾಡುವ ಅವಕಾಶ ನೀಡಿದ ಭಾರತ, 22.5 ಓವರಲ್ಲಿ 41 ರನ್‌ಗೆ ಆಲೌಟ್‌ ಮಾಡಿತು. ಅಂಡರ್‌-19 ಕ್ರಿಕೆಟ್‌ನಲ್ಲಿ ಇದು ಜಂಟಿ 3ನೇ ಹಾಗೂ ಅಂಡರ್‌-19 ವಿಶ್ವಕಪ್‌ನಲ್ಲಿ ಜಂಟಿ 2ನೇ ಅತಿ ಕನಿಷ್ಠ ಮೊತ್ತ. ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 4.5 ಓವರಲ್ಲಿ ವಿಕೆಟ್‌ ನಷ್ಟವಿಲ್ಲದೆ ಗುರಿ ತಲುಪಿತು. ಭಾರತ ಇನ್ನೂ 271 ಎಸೆತ ಬಾಕಿ ಇರುವಂತೆ ಗೆದ್ದು, ಅಂಡರ್‌-19 ಕ್ರಿಕೆಟ್‌ನಲ್ಲಿ 2ನೇ ಅತಿದೊಡ್ಡ ಜಯ ಪಡೆದ ತಂಡ ಎನಿಸಿತು. 2004ರಲ್ಲಿ ಆಸ್ಪ್ರೇಲಿಯಾ ತಂಡ ಸ್ಕಾಟ್ಲೆಂಡ್‌ ವಿರುದ್ಧ 277 ಎಸೆತಗಳು ಬಾಕಿ ಇರುವಾಗ ಗೆದ್ದು ವಿಶ್ವ ದಾಖಲೆ ಬರೆದಿತ್ತು.

ಇದನ್ನೂ ಓದಿ: ಅಂಡರ್‌ 19: ಯಶಸ್ವಿ ಜೈಸ್ವಾಲ್ ಅಬ್ಬರ, ಭಾರತಕ್ಕೆ ಸರಣಿ ಜಯ.

ಭಾರತ ಪರ ಇನ್ನಿಂಗ್ಸ್‌ ಆರಂಭಿಸಿದ ಯಶಸ್ವಿ ಜೈಸ್ವಾಲ್‌ (18 ಎಸೆತಗಳಲ್ಲಿ 29 ರನ್‌, 5 ಬೌಂಡರಿ, 1 ಸಿಕ್ಸರ್‌) ಹಾಗೂ ಕುಮಾರ್‌ ಕುಶಾಗ್ರ (13), ಜಪಾನ್‌ ಬೌಲರ್‌ಗಳಿಗೆ ವಿಕೆಟ್‌ ಕಬಳಿಸಿದ ಸಂಭ್ರಮವನ್ನು ಆಚರಿಸುವ ಅವಕಾಶವನ್ನು ನೀಡಲಿಲ್ಲ.

19 ಇತರೆ ರನ್‌
ಭಾರತೀಯ ಬೌಲರ್‌ಗಳ ದಾಳಿ ಎದುರು ಜಪಾನ್‌ನ ಯಾವೊಬ್ಬ ಬ್ಯಾಟ್ಸ್‌ಮನ್‌ ಸಹ ಎರಡಂಕಿ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕ ಶು ನೊಗುಚಿ ಹಾಗೂ ಕೆಂಟೊ ಡೊಬೆಲ್‌ ತಲಾ 7 ರನ್‌ ಗಳಿಸಿ, ಗರಿಷ್ಠ ರನ್‌ ಬಾರಿಸಿದ ಆಟಗಾರರು ಎನಿಸಿಕೊಂಡರು. ಭಾರತ 19 ರನ್‌ಗಳನ್ನು ಇತರೆ ರೂಪದಲ್ಲಿ ಕೊಡುಗೆಯಾಗಿ ನೀಡಿತು.

19 ರನ್‌ ಗಳಿಸುವಷ್ಟರಲ್ಲಿ ಜಪಾನ್‌ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಐವರು ಬ್ಯಾಟ್ಸ್‌ಮನ್‌ಗಳು ಸೊನ್ನೆಗೆ ಔಟಾದರು. ಭಾರತದ ಪರ ಸ್ಪಿನ್ನರ್‌ ರವಿ ಬಿಶ್ನೋಯಿ 8 ಓವರಲ್ಲಿ 3 ಮೇಡನ್‌ ಸಹಿತ 5 ರನ್‌ಗೆ 4 ವಿಕೆಟ್‌ ಕಿತ್ತರೆ, ಕಾರ್ತಿಕ್‌ ತ್ಯಾಗಿ 6 ಓವರಲ್ಲಿ 10 ರನ್‌ ನೀಡಿ 3 ವಿಕೆಟ್‌ ಕಿತ್ತರು. ನೀಡಿದ 10 ರನ್‌ ಪೈಕಿ 9 ವೈಡ್‌ ಆಗಿದ್ದವು. ಎಡಗೈ ವೇಗಿ ಆಕಾಶ್‌ ಸಿಂಗ್‌ 2 ಹಾಗೂ ಕರ್ನಾಟಕದ ವಿದ್ಯಾಧರ್‌ ಪಾಟೀಲ್‌ 1 ವಿಕೆಟ್‌ ಕಿತ್ತರು.

2 ಗೆಲುವುಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ, ಕ್ವಾರ್ಟರ್‌ ಫೈನಲ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಗುಂಪು ಹಂತದ ಕೊನೆ ಪಂದ್ಯವನ್ನು ಜ.24ರಂದು ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.

ಸ್ಕೋರ್‌: ಜಪಾನ್‌ 22.5 ಓವರಲ್ಲಿ 41/10 (ನೊಗುಚಿ 7, ಕೆಂಟೊ 7, ರವಿ 4-5, ಕಾರ್ತಿಕ್‌ 3-10), ಭಾರತ 4.5 ಓವರಲ್ಲಿ 42/0 (ಯಶಸ್ವಿ 29, ಕುಮಾರ್‌ 13)

271 ಎಸೆತ
ಭಾರತ ಇನ್ನೂ 271 ಎಸೆತ ಬಾಕಿ ಇರುವಂತೆ ಗೆದ್ದು, ಅಂಡರ್‌-19 ಕ್ರಿಕೆಟಲ್ಲಿ 2ನೇ ಅತಿದೊಡ್ಡ ಗೆಲುವು ಸಾಧಿಸಿತು.

122 ಎಸೆತ
ಜಪಾನ್‌ 22.5 ಓವರ್‌ (137 ಎಸೆತ) ಬ್ಯಾಟ್‌ ಮಾಡಿತು. ಇದರಲ್ಲಿ 122 ಎಸೆತಗಳಲ್ಲಿ ರನ್‌ ಗಳಿಸಲಿಲ್ಲ.

2 ಬೌಂಡರಿ
ಜಪಾನ್‌ ಇನ್ನಿಂಗ್ಸ್‌ನಲ್ಲಿ ಕೇವಲ 2 ಬೌಂಡರಿಗಳು ಮೂಡಿಬಂದವು.