ಪೋಚೆಫ್‌ಸ್ಟ್ರೋಮ್(ಫೆ.10): ಅಂಡರ್ 19 ವಿಶ್ವಕಪ್ ಟ್ರೋಫಿ ಗೆಲ್ಲೋ ನೆಚ್ಚಿನ ತಂಡವಾಗಿದ್ದ ಭಾರತ ಬರೀ ಕೈಯಲ್ಲಿ ತವರಿಗೆ ವಾಪಾಸ್ಸಾಗಿದೆ. ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಬಾಂಗ್ಲಾದೇಶ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ಇದರ ಜೊತೆಗೆ ಬಾಂಗ್ಲಾ ಕ್ರಿಕೆಟಿಗರ ವರ್ತನೆಗೆ ಆಕ್ರೋಶ ಹೆಚ್ಚಾಗಿದೆ. 

ಇದನ್ನೂ ಓದಿ: ಭಾರತ ಮಣಿಸಿದ ಬಾಂಗ್ಲಾದೇಶ ಅಂಡರ್ 19 ಚಾಂಪಿಯನ್

ಪಂದ್ಯ ಗೆಲ್ಲುತ್ತಿದ್ದಂತೆ ಬಾಂಗ್ಲಾದೇಶ ಕ್ರಿಕೆಟಿಗರು ಭಾರತೀಯ ಕ್ರಿಕೆಟಿಗರ ಜೊತೆ ವಾಗ್ವಾದಕ್ಕಿಳಿದು ಹಲ್ಲೆಗೆ ಮುಂದಾಗಿದ್ದಾರೆ. ಗೆಲುವಿನ ಗೆರೆ ದಾಟುತ್ತಿದ್ದಂತೆ ಡಗೌಟ್‌ನಲ್ಲಿದ್ದ ಬಾಂಗ್ಲಾ ಕ್ರಿಕೆಟಿಗರು ಸಂಭ್ರಮಾಚರಣಗಾಗಿ ಮೈದಾನಕ್ಕಿಳಿದಿದ್ದಾರೆ. ಈ ವೇಳೆ ಭಾರತೀಯ ಕ್ರಿಕೆಟಿಗರಿಗೆ ಅಸಭ್ಯ ಕಮೆಂಟ್ ಮಾಡಿದ್ದಾರೆ. ಸಂಭ್ರಮಾಚರಣೆ ಜೊತೆಗೆ ಭಾರತೀಯ ಕ್ರಿಕೆಟಿಗರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. 

ಬಾಂಗ್ಲಾ ಕ್ರಿಕೆಟಿಗರ ವರ್ತನೆಗೆ ಸಿಟ್ಟಾದ ಭಾರತೀಯ ಕ್ರಿಕೆಟಿಗರು ಪ್ರಶ್ನಿಸಲು ಮುಂದಾದಾಗ ಹಲ್ಲೆಗೆ ಯತ್ನಿಸಿದ್ದಾರೆ. ತಕ್ಷಣವೇ ಅಧಿಕಾರಿಗಳು ತಂಡದ ಸಹಾಯಕ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ  ತಿಳಿಗೊಳಿಸಿದ್ದಾರೆ. 

 

ಪಂದ್ಯದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಾಂಗ್ಲಾದೇಶ ನಾಯಕ ಅಕ್ಬರ್ ಆಲಿ, ಗೆಲುವಿನ ಸಂಭ್ರಮದಲ್ಲಿ ನಮ್ಮ ತಂಡ ಹದ್ದು ಮೀರಿ ವರ್ತಿಸಿದೆ. ಅತೀವ ಉತ್ಸಾಹ, ಸಂಭ್ರಮದಿಂದ ಈ ರೀತಿ ಆಗಿದೆ. ಇದಕ್ಕಾಗಿ ತಂಡದ ಪರವಾಗಿ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಇನ್ನು ಭಾರತದ ನಾಯಕ ಪ್ರಿಯಂ ಗರ್ಗ್ ಬಾಂಗ್ಲಾ ಕ್ರಿಕೆಟಿಗರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಲು ಗೆಲುವು ಇದ್ದೇ ಇರುತ್ತೆ. ಆದರೆ ಗೆಲುವು ಸಾಧಿಸಿದ ಬಾಂಗ್ಲಾ ಕ್ರಿಕೆಟಿಗರ ವರ್ತನೆ ಸಹಿಸಲು ಅಸಾಧ್ಯ. ಇದು ಕ್ರಿಕೆಟ್‌ಗೆ ಉತ್ತಮವಲ್ಲ. ಆದರೆ ನಡೆದು ಹೋಗಿದೆ ಎಂದು ಗರ್ಗ್ ಹೇಳಿದ್ದಾರೆ.