"

ಪೋಚೆಸ್ಟ್ರೋಮ್(ಫೆ.09): ಅಂಡರ್ 19 ವಶ್ವಕಪ್ ಟೂರ್ನಿಯಲ್ಲಿ ಇತಿಹಾಸ ರಚಿಸುವ ಸುವರ್ಣ ಅವಕಾಶವನ್ನು ಭಾರತ ಕೈಚೆಲ್ಲಿದೆ. 5ನೇ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತ, ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಬಾಂಗ್ಲಾದೇಶಕ್ಕೆ ಶರಣಾಗಿದೆ. ಅಂತಿಮ ಹಂತದಲ್ಲಿ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. ಇದು ಭಾರತಕ್ಕೆ ಮತ್ತಷ್ಟು ಹಿನ್ನಡೆ ತಂದಿತು. ರೋಚಕ ಪಂದ್ಯದಲ್ಲಿ ಭಾರತವನ್ನು ಮಣಿಸಿದ ಬಾಂಗ್ಲಾ ಬಾಂಗ್ಲಾ ಮೊಟ್ಟ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್  ಟ್ರೋಫಿ ಗೆದ್ದು ದಾಖಲೆ ಬರೆಯಿತು.

ಪ್ರಶಸ್ತಿ ಗೆಲುವಿನ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಸಂಪೂರ್ಣ ಕಳಪೆಯಾಗಿತ್ತು.ಯಶಸ್ವಿ ಜೈಸ್ವಾಲ್ ಹೊರತು ಪಡಿಸಿದರೆ ಇನ್ಯಾರು ಕೂಡ ಕನಿಷ್ಟ ಹೋರಾಟ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶಕ್ಕೆ 178 ರನ್ ಸುಲಭ ಟಾರ್ಗೆಟ್ ನೀಡಿತು. ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆಯಿತು. 

ಪರ್ವೆಜ್ ಹುಸೈನ್ ಹಾಗೂ ತನಿಝಿದ್ ಹಸನ್ ಜೊತೆಯಾಟದಿಂದ ಬಾಂಗ್ಲಾ ಗೆಲುವಿನತ್ತ ಹೆಜ್ಜೆ ಹಾಕಿತು. 17 ರನ್ ಸಿಡಿಸಿದ ತನಿಝಿದ್ ವಿಕೆಟ್ ಕಕಬಳಿಸಿದ ರವಿ ಬಿಶ್ನೋಯಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಮೊಹಮ್ಮದುಲ್ಲ ಹಸನ್ ಕೇವಲ 8 ರನ್ ಸಿಡಿಸಿ ನಿರ್ಗಮಿಸಿದರು. ತವ್ಹಿದ್ ಹಿಡ್ರೊಯ್ ಶೂನ್ಯಕ್ಕೆ ಔಟಾದರು.

ಭಾರತ ಮಣಿಸಿದ ಬಾಂಗ್ಲಾದೇಶ ಅಂಡರ್ 19 ಚಾಂಪಿಯನ್

ಇತ್ತ ಆರಂಭಿಕ ಪರ್ವೇಜ್ ಹುಸೈನ್ ಗಾಯಗೊಂಡು ಹೊರನಡೆದಾಗ ಟೀಂ ಇಂಡಿಯಾ ಅಭಿಮಾನಿಗಳ ಸಂಭ್ರಮ ಹೆಚ್ಚಾಯಿತು. ಇತ್ತ ಶಹಾದತ್ ಹುಸೈನ್ ಹಾಗೂ ಶಮೀಮ್ ಹುಸೈನ್ ಬಹುಬೇಗನೆ ಪೆವಿಲಿಯನ್ ಸೇರಿಕೊಂಡರು. ಅವಿಶೇಕ್ ದಾಸ್ 5 ರನ್ ಸಿಡಿಸಿ ಔಟಾದರು. ಆಕ್ಬರ್ ಆಲಿ ಬ್ಯಾಟಿಂಗ್ ಮುಂದುವರಿಸಿದರು. ಇತ್ತ ಗಾಯಗೊಂಡಿದ್ದ ಆರಂಭಿಕ ಪರ್ವೇಝ್ ಮತ್ತೆ ಕಣಕ್ಕಿಳಿದರು. ಇವರಿಬ್ಬರ ಜೊತೆಯಾಟ ಟೀಂ ಇಂಡಿಯಾ ಆತಂಕ ಹೆಚ್ಚಿಸಿತು. 

ಪರ್ವೇಝ್ 47 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಬಾಂಗ್ಲಾ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರೂ ವಿಕೆಟ್ ಇಲ್ಲದೆ ಪರದಾಡಿತು. ಇತ್ತ ಟೀಂ ಇಂಡಿಯಾ ವಿಕೆಟ್ ಕಬಳಿಸಲು ಇನ್ನಿಲ್ಲದ ಕಸರತ್ತು ಮಾಡಿತು. ಆದರೆ ಅಕ್ಬರ್ ಆಲಿ ಹೋರಾಟಕ್ಕೆ ಬಾಂಗ್ಲಾದೇಶ ಗೆಲುವಿನತ್ತ ಹೆಜ್ಜೆ ಇಟ್ಟಿತು. ಬಾಂಗ್ಲಾದೇಶ ಗೆಲುವಿಗೆ 54 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು. 

ಡಕ್‌ವರ್ತ್ ನಿಯಮದ ಪ್ರಕಾರ ಗುರಿ ಬದಲಾಯಿಸಲಾಯಿತು. ಬಾಂಗ್ಲಾದೇಶಕ್ಕೆ 46 ಓವರ್‌ಗಳಲ್ಲಿ 170 ರನ್ ಟಾರ್ಗೆಟ್ ನೀಡಲಾಯಿತು. ಹೀಗಾಗಿ ಮಳೆ ನಿಂತಾಗ ಬಾಂಗ್ಲಾದೇಶ ತಂಡದ ಗೆಲುವಿಗೆ 30 ಎಸೆತದಲ್ಲಿ 7 ರನ್ ಅವಶ್ಯಕತೆ ಇತ್ತು. ಅಕ್ಬರ್ ಆಲಿ ಹಾಗೂ ರಕಿಬುಲ್ ಹಸನ್ ಬಾಂಗ್ಲಾದೇಶಕ್ಕೆ ಗೆಲುವು ತಂದುಕೊಟ್ಟರು. ಬಾಂಗ್ಲಾದೇಶ 3 ವಿಕೆಟ್ ಗೆಲುವು ಸಾಧಿಸಿ ಮೊದಲ ಅಂಡರ್ 19 ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.