Asianet Suvarna News Asianet Suvarna News

Virat Kohli Captaincy ತಲೆದಂಡ, ಬಿಸಿಸಿಐ ವಿರುದ್ದ ತಿರುಗಿಬಿದ್ದ ವಿರಾಟ್ ಫ್ಯಾನ್ಸ್‌..!

* ಭಾರತ ಏಕದಿನ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಗೇಟ್‌ಪಾಸ್

* ಸೀಮಿತ ಓವರ್‌ಗಳ ತಂಡದ ನಾಯಕನಾಗಿ ರೋಹಿತ್ ಶರ್ಮಾಗೆ ಪಟ್ಟ

* ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಮೇಲೆ ತಿರುಗಿಬಿದ್ದ ಫ್ಯಾನ್ಸ್‌

Twitter outrageous at BCCI President Sourav Ganguly for sacking Virat Kohli as Team India ODI captain kvn
Author
Bengaluru, First Published Dec 9, 2021, 1:29 PM IST

ಬೆಂಗಳೂರು(ಡಿ.09): ಭಾರತ ಕ್ರಿಕೆಟ್‌ ಕಂಡ ಅತ್ಯಂತ ಆಕ್ರಮಣಕಾರಿ ಹಾಗೂ ಯಶಸ್ವಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನು ಬಿಸಿಸಿಐ (BCCI) ಏಕಾಏಕಿ ಭಾರತ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದ್ದು, ರೋಹಿತ್ ಶರ್ಮಾಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಭಾರತಕ್ಕೆ ಹಲವಾರು ಸ್ಮರಣೀಯ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟ ವಿರಾಟ್ ಕೊಹ್ಲಿಯನ್ನು ಹೀಗೆ ಏಕಾಏಕಿ ಬಿಸಿಸಿಐ ಕೆಳಗಿಳಿಸಿರುವ ಬಗ್ಗೆ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮೇಲೆ ವಿರಾಟ್ ಕೊಹ್ಲಿ ಅಭಿಮಾನಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಹೌದು, ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ರೋಹಿತ್ ಶರ್ಮಾಗೆ (Rohit Sharma) ಏಕದಿನ ತಂಡದ ನಾಯಕತ್ವ ಪಟ್ಟ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ್ದರೆ, ಮತ್ತೆ ಕೆಲವರು ವಿರಾಟ್ ಕೊಹ್ಲಿ ಪದಚ್ಯುತಿ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ವಿರುದ್ದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 

ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ರೀತಿಯ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಇದಾದ ಬಳಿಕ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಚೇತನ್‌ ಶರ್ಮಾ (Chethan Sharma) ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಿತ್ತು. ಈ ಕುರಿತಂತೆ ಟ್ವೀಟ್ ಮಾಡಿದ್ದ ಬಿಸಿಸಿಐ, ಇದೇ ವೇಳೆ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರನ್ನು ಏಕದಿನ ಹಾಗೂ ಟಿ20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದೆ ಎಂದು ಟ್ವೀಟ್‌ ಮಾಡಿದೆ. 

ಆದರೆ ಈ ಕ್ಷಣದವರೆಗೂ ವಿರಾಟ್ ಕೊಹ್ಲಿಯೇ ಏಕದಿನ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದರಾ ಅಥವಾ ಬಿಸಿಸಿಐ ಏಕಪಕ್ಷೀಯವಾಗಿ ವಿರಾಟ್ ಕೊಹ್ಲಿ ತಲೆದಂಡ ಮಾಡಿತೇ ಎನ್ನುವುದನ್ನು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಅಭಿಮಾನಿಗಳು ಇದೀಗ ಬಿಸಿಸಿಐ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೇಲೆ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೊರಹಾಕಿದ್ದಾರೆ.

India Tour of South Africa: ಬಲಿಷ್ಠ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೂ ರೋಹಿತ್ ಕ್ಯಾಪ್ಟನ್‌..!

ಅಷ್ಟಕ್ಕೂ ವಿರಾಟ್ ಕೊಹ್ಲಿ ತಲೆದಂಡ ಮಾಡಿದ್ದೇಕೆ? ನಾಯಕನಾಗಿ 95 ಪಂದ್ಯಗಳಲ್ಲಿ 65 ಪಂದ್ಯಗಳನ್ನು ಗೆಲ್ಲಿಸಿದ್ದು ಉತ್ತಮ ಪ್ರದರ್ಶನವಲ್ಲವೇ?, ವಿಶ್ವಕಪ್‌ ಮಾತ್ರವೇ ನಿಮ್ಮ ಗುರಿಯೇ? ಹಾಗಿದ್ದರೇ ಧೋನಿ ಹಾಗೂ ಗಂಗೂಲಿ ವಿಶ್ವಕಪ್‌ನಲ್ಲಿ ಸೋತಿಲ್ಲವೇ? ಎಂದು ನೆಟ್ಟಿಗನೊಬ್ಬ ಪ್ರಶ್ನೆಯ ಸುರಿಮಳೆ ಸುರಿಸಿದ್ದಾನೆ.

ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ದಿಗ್ಗಜ ಕ್ರಿಕೆಟಿಗನಿಗೆ ಬಿಸಿಸಿಐ ತೋರಿದ ಅಗೌರವವಿದು. ಒಂದು ಧನ್ಯವಾದದ ಟ್ವೀಟ್ ಕೂಡಾ ಇಲ್ಲ. ನಾಚಿಕೆಯಾಗಬೇಕು ಬಿಸಿಸಿಐಗೆ. ನಾಚಿಕೆಯಾಗಬೇಕು ಜಯ್ ಶಾ ಹಾಗೂ ಸೌರವ್‌ ಗಂಗೂಲಿಗೆ ಎಂದು ಮತ್ತೊಬ್ಬ ಟ್ವೀಟ್‌ ಮಾಡಿದ್ದಾನೆ.

ಸೌರವ್ ಗಂಗೂಲಿ ಬಳಿಕ ಬಿಸಿಸಿಐ ನಾಯಕತ್ವ ತಲೆದಂಡ ಮಾಡಿರುವುದು ವಿರಾಟ್ ಕೊಹ್ಲಿಯನ್ನು. ಇದು ಭಾರತ ಕ್ರಿಕೆಟ್ ತಂಡದ ದೃಷ್ಠಿಯಿಂದ (Indian Cricket Team) ಒಳ್ಳೆಯ ಬೆಳವಣಿಗೆಯಲ್ಲ ಎಂದು ಹಲವು ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ, ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ತಾವು ಮುಂಬರುವ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಇದೇ ವೇಳೆ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯುವುದಾಗಿಯೂ ಸ್ಪಷ್ಟಪಡಿಸಿದ್ದರು. ಇನ್ನು ಭಾರತದಲ್ಲೇ 2023ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಇಂಗಿತವನ್ನು ಕೊಹ್ಲಿ ವ್ಯಕ್ತಪಡಿಸಿದ್ದರು. ಆದರೆ ಇದೀಗ ಟಿ20 ಹಾಗೂ ಏಕದಿನ ಭಾರತ ಕ್ರಿಕೆಟ್‌ ತಂಡಕ್ಕೆ ರೋಹಿತ್ ಶರ್ಮಾಗೆ ನಾಯಕತ್ವ ಪಟ್ಟ ಕಟ್ಟುವ ಮೂಲಕ ಕೊಹ್ಲಿ ಆಸೆಗೆ ತಣ್ಣೀರೆರಚಿದೆ ಬಿಸಿಸಿಐ. ಸದ್ಯ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.

Follow Us:
Download App:
  • android
  • ios