* ಎಡ್ಜ್‌ಬಾಸ್ಟನ್‌ನಲ್ಲಿ ಶತಕ ಸಿಡಿಸಿದ ರಿಷಭ್ ಪಂತ್* ಸಾಮಾಜಿಕ ಜಾಲತಾಣಗಳಲ್ಲಿ ಪಂತ್ ಬ್ಯಾಟಿಂಗ್‌ ಬಗ್ಗೆ ಮೆಚ್ಚುಗೆ* ವೃತ್ತಿಜೀವನದಲ್ಲಿ 5ನೇ ಟೆಸ್ಟ್‌ ಶತಕ ಸಿಡಿಸಿದ ರಿಷಭ್ ಪಂತ್ 

ಬರ್ಮಿಂಗ್‌ಹ್ಯಾಮ್‌(ಜು.02): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ ಟೆಸ್ಟ್‌ ವೃತ್ತಿಜೀವನದ 5ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ. ಇಲ್ಲಿನ ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವೇ ಬಲಿಷ್ಠ ಇಂಗ್ಲೆಂಡ್ ಬೌಲಿಂಗ್ ಪಡೆಗೆ ತಿರುಗೇಟು ನೀಡುವ ಮೂಲಕ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ರಿಷಭ್ ಪಂತ್‌ ಅವರ ಸ್ಪೋಟಕ ಬ್ಯಾಟಿಂಗ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಎಡ್ಜ್‌ಬಾಸ್ಟನ್‌ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್‌ (Ben Stokes) ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರೀಕ್ಷೆಯಂತೆಯೇ ಬೌಲಿಂಗ್ ಮಾಡಿದ ಇಂಗ್ಲೆಂಡ್ ಬೌಲರ್‌ಗಳು ಟೀಂ ಇಂಡಿಯಾ ಮೂರಂಕಿ ಮೊತ್ತ ದಾಖಲಿಸುವ ಮುನ್ನವೇ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಿದ್ದರು. ಇಂಗ್ಲೆಂಡ್‌ ವೇಗಿಗಳಾದ ಜೇಮ್ಸ್ ಆಂಡರ್‌ಸನ್ ಹಾಗೂ ಮ್ಯಾಟ್ ಪಾಟ್ಸ್‌ ಮಾರಕ ದಾಳಿಗೆ ತತ್ತರಿಸಿ ಕೇವಲ 98 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಚೇತೇಶ್ವರ್ ಪೂಜಾರ, ಶುಭ್‌ಮನ್ ಗಿಲ್‌, ಹನುಮ ವಿಹಾರಿ, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಇಂಗ್ಲೆಂಡ್ ವೇಗಿಗಳು ಅವಕಾಶ ನೀಡಲಿಲ್ಲ.

ಟೀಂ ಇಂಡಿಯಾ (Team India) 98 ರನ್‌ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಅಕ್ಷರಶಃ ಸಂಕಷ್ಟದ ಸ್ಥಿತಿಯಲ್ಲಿದ್ದ ಭಾರತಕ್ಕೆ ಆರನೇ ವಿಕೆಟ್‌ಗೆ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ 222 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರಲ್ಲೂ ಬಲಿಷ್ಠ ಇಂಗ್ಲೆಂಡ್ ಬೌಲರ್‌ಗಳೆದುರು ನಿರ್ಭಯವಾಗಿ ಬ್ಯಾಟ್ ಬೀಸಿದ ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು.

ರಿಷಭ್‌ ಪಂತ್ (Rishabh Pant) ಬ್ಯಾಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅಮಿತ್ ಮಿಶ್ರಾ ಟ್ವೀಟ್ ಮಾಡಿ, ಯಾವಾಗೆಲ್ಲಾ ಸಮಸ್ಯೆಯಾಗುತ್ತದೆಯೋ ಆಗೆಲ್ಲಾ ಸ್ಪೈಡರ್‌ಮ್ಯಾನ್‌ಗೆ ಕರೆ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಎಂತಹ ಅದ್ಭುತವಾದ ಇನಿಂಗ್ಸ್‌ ಆಡಿದರು ರಾಕ್‌ಸ್ಟಾರ್ ರಿಷಭ್ ಪಂತ್. ಒಳ್ಳೆಯ ಇಂಗ್ಲೆಂಡ್ ಬೌಲಿಂಗ್ ಪಡೆಯೆದರು ಇಂತಹ ಪರಿಸ್ಥಿತಿಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು ಎಂದು ಅಮಿತ್ ಮಿಶ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Birmingham Test: 146 ರನ್ ಚಚ್ಚಿ ಹಲವು ದಾಖಲೆ ಬರೆದ ರಿಷಭ್ ಪಂತ್..!

ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ದರೇ ನೀವು ಪಂದ್ಯದ ದಿಕ್ಕನ್ನೆ ಬದಲಿಸಬಹುದು ಎನ್ನುವುದನ್ನು ರಿಷಭ್‌ ಪಂತ್ ಸಾಬೀತು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟ್ವೀಟ್‌ ಮಾಡಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…

ಇನ್ನು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಅದ್ಭುತ ಶತಕ. ತಂಡಕ್ಕೆ ಅಗತ್ಯವಿದ್ದಾಗ ಅತ್ಯುತ್ತಮವಾಗಿ ಆಡಿದರು ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.