T20 World Cup:ಬೌಲ್ಟ್ ಬಿರುಗಾಳಿ, ಕಿವೀಸ್ ಎದುರು ಲಂಕಾಗೆ ಹೀನಾಯ ಸೋಲು..!

ಶ್ರೀಲಂಕಾ ವಿರುದ್ದ ನ್ಯೂಜಿಲೆಂಡ್‌ಗೆ ಭರ್ಜರಿ ಜಯಭೇರಿ
65 ರನ್‌ಗಳ ಅಂತರದ ಗೆಲುವು ದಾಖಲಿಸಿದ ಕಿವೀಸ್‌ ಪಡೆ
ಪ್ರಮುಖ 4 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಟ್ರೆಂಟ್ ಬೌಲ್ಟ್‌

Trent Boult pics 4 New Zealand Thrash Sri Lanka by 65 runs in Sydney kvn

ಸಿಡ್ನಿ(ಅ.29): ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಕೇವಲ 102 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 65 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇನ್ನು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಗೆಲುವಿನೊಂದಿಗೆ ಕೇನ್‌ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್‌ ತಂಡವು ಸೆಮೀಸ್‌ನತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ಗ್ರೂಪ್ 1ನಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ನೀಡಿದ್ದ 168 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಅನುಭವಿ ವೇಗಿಗಳಾದ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಆರಂಭದಲ್ಲೇ ಶಾಕ್ ನೀಡಿದರು. ಸೌಥಿ ಮೊದಲ ಓವರ್‌ನಲ್ಲೇ ಪಥುಮ್ ನಿಸ್ಸಾಂಕ ಅವರನ್ನು ಎಲ್‌ಬಿ ಬಲೆಗೆ ಕೆಡವಿದರೆ, ಪವರ್‌ ಪ್ಲೇನಲ್ಲೇ ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಯಶಸ್ವಿಯಾದರು. ಇನ್ನು ಬೌಲಿಂಗ್ ಆಲ್ರೌಂಡರ್ ಚಮಿಕಾ ಕರುಣರತ್ನೆ ಕೂಡಾ ಒಂದಂಕಿ ಮೊತ್ತಕ್ಕೆ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ನ್ಯೂಜಿಲೆಂಡ್ ತಂಡವು 25 ರನ್ ಗಳಿಸುವಷ್ಟರಲ್ಲಿ ಐವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. 

ರಾಜಪಕ್ಸಾ- ಶನಕಾ ಆಸರೆ: ಕಿವೀಸ್‌ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ 6ನೇ ವಿಕೆಟ್‌ಗೆ ಭನುಕಾ ರಾಜಪಕ್ಸಾ ಹಾಗೂ ನಾಯಕ ದಶುನ್ ಶನಕಾ 36 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ರಾಜಪಕ್ಸಾ 22 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 34 ರನ್ ಬಾರಿಸಿ ಲಾಕಿ ಫರ್ಗ್ಯೂಸನ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಇನ್ನೊಂದು ತುದಿಯಲ್ಲಿ ತಂಡಕ್ಕೆ ಆಸರೆಯಾಗುವ ಯತ್ನ ನಡೆಸಿದ ನಾಯಕ ಶನಕ 32 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 35 ರನ್ ಬಾರಿಸಿ ಟ್ರೆಂಟ್‌ ಬೌಲ್ಟ್‌ಗೆ ನಾಲ್ಕನೇ ಬಲಿಯಾದರು.

T20 World Cup: ಕುಸಿದ ಕಿವೀಸ್‌ಗೆ ಗ್ಲೆನ್‌ ಫಿಲಿಫ್ಸ್‌ ಶತಕದ ಆಸರೆ..!

ಲಂಕಾ ಪರ ಭನುಕಾ ರಾಜಪಕ್ಸಾ(34) ಹಾಗೂ ದಶುನ್ ಶನಕಾ ಹೊರತುಪಡಿಸಿ ಯಾವೊಬ್ಬ ಬ್ಯಾಟರ್‌ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. ಇನ್ನು ನ್ಯೂಜಿಲೆಂಡ್ ತಂಡದ ಪರ ಮಾರಕ ದಾಳಿ ನಡೆಸಿದ ಟ್ರೆಂಟ್ ಬೌಲ್ಟ್‌ 4 ಓವರ್ ಬೌಲಿಂಗ್‌ ಮಾಡಿ ಕೇವಲ 13 ರನ್ ನೀಡಿ 4 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ತಲಾ 2, ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡದ ಆರಂಭ ಕೂಡಾ ಅಷ್ಟೇನೂ ಉತ್ತಮವಾಗಿರಲಿಲ್ಲ. 15 ರನ್ ಗಳಿಸುವಷ್ಟರಲ್ಲಿ ಕಿವೀಸ್‌ನ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.  ಇದಾದ ಬಳಿಕ 4ನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಫ್ಸ್‌ 86 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ಮಾರ್ಕ್ ಚಾಪ್ಮನ್ ಬದಲಿಗೆ ತಂಡ ಕೂಡಿಕೊಂಡ ಡೇರಲ್ ಮಿಚೆಲ್‌ ಸಮಯೋಚಿತ ಜತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಡೇರಲ್ ಮಿಚೆಲ್‌ 24 ಎಸೆತಗಳನ್ನು ಎದುರಿಸಿ 22 ರನ್ ಗಳಿಸಿ ವನಿಂದು ಹಸರಂಗ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಗ್ಲೆನ್ ಫಿಲಿಫ್ಸ್‌ ಶತಕದ ಮೆರಗು: ಅಗ್ರಕ್ರಮಾಂಕದ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದರೂ, ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ಗ್ಲೆನ್ ಫಿಲಿಫ್ಸ್‌ ತಂಡಕ್ಕೆ ಅಸರೆಯಾದರು. ಡೇರಲ್ ಮಿಚೆಲ್ ಜತೆಗೆ ಅರ್ಧಶತಕದ ಜತೆಯಾಟ ನಿಭಾಯಿಸಿದ ಫಿಲಿಫ್ಸ್‌, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿ ಮೆರೆದಾಡಿದರು. ಗ್ಲೆನ್ ಫಿಲಿಫ್ಸ್ ಕೇವಲ 61 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಗ್ಲೆನ್ ಫಿಲಿಫ್ಸ್‌ 64 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 104 ರನ್ ಬಾರಿಸಿ ಕೊನೆಯ ಓವರ್‌ನಲ್ಲಿ ಲಹಿರು ಕುಮಾರಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Latest Videos
Follow Us:
Download App:
  • android
  • ios